ಬೆಂಗಳೂರು, ಜು.14-ಪೆಟ್ರೋಲ್-ಡೀಸಲ್ ಬೆಲೆ ಹೆಚ್ಚಳ ಮಾಡಿದ್ದನ್ನೇ ದೊಡ್ಡ ಅಪರಾಧ ಎಂಬಂತೆ ಬಿಂಬಿಸುತ್ತಿದ್ದೀರಿ. ಅದೇ ಅಡುಗೆ ಅನಿಲದ ದರ ಏರಿಕೆ ಮಾಡಿದ ಕೇಂದ್ರ ಸರ್ಕಾರದ ವಿರುದ್ಧ ಚಕಾರವೆತ್ತುತ್ತಿಲ್ಲ ಎಂದು ಮಾಧ್ಯಮಗಳ ವಿರುದ್ಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಹರಿಹಾಯ್ದರು.
ರಾಜ್ಯ ವಿಕಲಚೇತನರ ಸೇವಾ ಸಂಸ್ಥೆಗಳ ಒಕ್ಕೂಟ ಆಯೋಜಿಸಿದ್ದ ವಿಶೇಷ ಶಾಲೆಗಳ, ವಿಶೇಷ ಮಕ್ಕಳ ಹಾಗೂ ಅವರ ಪೆÇೀಷಕರ, ವಿಶೇಷ ಶಿಕ್ಷಕರ, ಶಿಕ್ಷಕೇತರ ಸಿಬ್ಬಂದಿಗಳ ರಾಜ್ಯಮಟ್ಟದ ಸಮಾವೇಶ, ಸ್ಪಂದನಾ-2018 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸರ್ಕಾರ 450 ರೂ.ಗಳಿಂದ 700ರೂ.ಗಳಿಗೆ ಅಡುಗೆ ಅನಿಲ ದರ ಏರಿಕೆ ಮಾಡಿದೆ. ನಾವು ಪೆಟ್ರೋಲ್-ಡೀಸಲ್ ಒಂದು ರೂ., ವಿದ್ಯುತ್ ಬೆಲೆ ತಿಂಗಳಿಗೆ 10 ರೂ. ಹೆಚ್ಚಿಸಿದ್ದೇವೆ. ಆದರೆ ಇದೇ ಹೊರೆಯಾಗುತ್ತದೆಯೇ ಎಂದ ಅವರು, ನಾಡಿನ ಅಭಿವೃದ್ಧಿಗೆ ಜನ ಇಷ್ಟು ಸಹಕಾರ ನೀಡುವುದಿಲ್ಲವೇ ಎಂದು ಪ್ರಶ್ನಿಸಿದರು.
ನನ್ನ ಮೇಲೆ ಏಕೆ ಆಪಾದನೆ ಮಾಡುತ್ತೀರಿ. ಸಾಲ ಮನ್ನಾ ಹುಡುಗಾಟಿಕೆಯ ವಿಚಾರವಲ್ಲ. ಮೂವತ್ತು ಜಿಲ್ಲೆಗಳಿಗೂ ನಾನು ಮುಖ್ಯಮಂತ್ರಿ. ಕಾಲಾವಕಾಶ ಸಿಕ್ಕರೆ ಎಲ್ಲರಿಗೂ ಒಳ್ಳೆಯದನ್ನೇ ಮಾಡುತ್ತೇನೆ. ರೈತರ ಸಾಲ ಮನ್ನಾ ಮಾಡಿದ ನನ್ನ ಮೇಲೆ ಕನಿಕರವಿಲ್ಲವೇ? 60 ವರ್ಷಗಳ ಸಮಸ್ಯೆಯನ್ನು ಏಕಾಏಕಿ ಪರಿಹರಿಸಲು ಸಾಧ್ಯವೇ ಎಂದರು.
ಕೊಡಗಿನಲ್ಲಿ ಹೆಚ್ಚು ಮಳೆಯಾಗುತ್ತಿದೆ. ಅದರಿಂದ ಜನರಿಗೂ ತೊಂದರೆಯಾಗುತ್ತಿದೆ ನಿಜ. ಕೊಡಗಿನ ಶಾಸಕರಿಗೂ ಹೇಳಿದ್ದೇನೆ. ನಾನೇ ಬಂದು ಸಮಸ್ಯೆ ನೋಡಿ ಬಗೆಹರಿಸುವುದಾಗಿಯೂ ಭರವಸೆ ನೀಡಿದ್ದೇನೆ. ನಾನು ಮುಖ್ಯಮಂತ್ರಿಯಾಗಿ ಇನ್ನು ಎರಡು ತಿಂಗಳಾಗಿಲ್ಲ, ನನ್ನ ವಿರುದ್ಧ ಜನರನ್ನು ಎತ್ತಿಕಟ್ಟಲು ಪ್ರಯತ್ನಿಸಬೇಡಿ ಎಂದು ಖಡಕ್ ಆಗಿ ನುಡಿದರು.
ಯಾರೂ ಬೇಕಾದರೂ ಬಂದು ನನ್ನ ಬಳಿ ಸಮಸ್ಯೆ ಹೇಳಿಕೊಳ್ಳಬಹುದು. ನಾನು ಅವರಿಗೆ ಸ್ಪಂದಿಸುತ್ತೇನೆ. ಕಳೆದೆರಡು ತಿಂಗಳಿನಿಂದ ಟೀಕೆ ಮಾಡಿರುವುದು ಸಾಕು. ಸಾಲ ಮನ್ನಾ ಮಾಡಿ ನನ್ನ ಬದ್ಧತೆ ಪೂರೈಸಿದ್ದೇನೆ. ನನ್ನಲ್ಲಿ ದೋಷವಿದ್ದರೆ ಬಂದು ತಿಳಿಸಿ. ನಾನು ಜನರ ಮಧ್ಯೆ ಬದುಕುವ ಸಿಎಂ. ನನ್ನ ಮತ್ತು ಜನರ ಮಧ್ಯೆ ಎತ್ತಿಕಟ್ಟಲು ನೋಡಬೇಡಿ. ನನ್ನ ಮೇಲೆ ನಿಮಗೇಕೆ ಆಕ್ರೋಶ? ಏಕೆ ಆಪಾದನೆ ಮಾಡುತ್ತೀರಿ, ಸುಮ್ಮನೆ ತೊಂದರೆ ಕೊಡಬೇಡಿ ಎಂದು ಹೇಳಿದರು.
ವಿಕಲಚೇತನರಿಗೆ ಪ್ರತ್ಯೇಕ ಕ್ರೀಡಾಕೂಟ:
ವಿಕಲಚೇತನ ಮಕ್ಕಳಿಗೆ ವಿಶೇಷ ಆದ್ಯತೆ ನೀಡುವ ಮನಸ್ಸಿದೆ. ಈ ನಿಟ್ಟಿನಲ್ಲಿ ವಿಕಲಚೇತರಿಗೆ ಪ್ರತ್ಯೇಕ ಕ್ರೀಡಾಕೂಟವನ್ನು ಒಲಂಪಿಕ್ ಮಾದರಿಯಲ್ಲಿ ಮಂಗಳೂರಿನಲ್ಲಿ ನಡೆಸಲು ಉದ್ದೇಶಿಸಲಾಗಿದೆ.
ವಿಧಾನಸೌಧಕ್ಕೆ ನೇರವಾಗಿ ಬಂದು ಭೇಟಿ ಮಾಡುವ ಅವಕಾಶವನ್ನು ಹಿಂದಿನ ಸರ್ಕಾರ ಕಲ್ಪಿಸಿದೆ. ಆ ಸರ್ಕಾರಕ್ಕೆ ಬಡ ಮಕ್ಕಳ ಬಗ್ಗೆ ಇದ್ದ ಬದ್ಧತೆ ಶ್ಲಾಘನೀಯ ಎಂದರು.
ವಿಕಲಚೇತನರ ಸಾಲ ಮನ್ನಾ ಮಾಡಲು ನಾಲ್ಕು ಕೋಟಿ ಅನುದಾನ ಹಾಗೂ 21 ರೀತಿಯ ವಿಕಲಚೇತನ ವ್ಯಕ್ತಿಗಳ ಅಭಿವೃದ್ಧಿಗಾಗಿ 5 ಕೋಟಿ ಅನುದಾನ ಮೀಸಲಿಟ್ಟಿದ್ದೇವೆ. ಪ್ರಮುಖ ಏಳು ಬೇಡಿಕೆಗಳನ್ನು ಮುಂದಿಟ್ಟಿದ್ದೀರಿ. ಆ ಬಗ್ಗೆಯೂ ಪರಿಶೀಲಿಸಿ ಕ್ರಮವಹಿಸುವುದಾಗಿ ತಿಳಿಸಿದರು.
ವಿದೇಶದಲ್ಲಿ ಪಿಎಚ್‍ಡಿ ಹೋಗುವ ವಿಕಲಚೇತನ ಮಕ್ಕಳಿಗೆ ಒಂದು ಕೋಟಿ ರೂ. ಅನುದಾನ ತೆಗೆದಿರಿಸಲಾಗಿದೆ. 20 ಎಕರೆ ಜಾಗದಲ್ಲಿ ವಿಕಲಚೇತನರ ಕ್ಯಾಂಪಸ್ ನಿರ್ಮಾಣಕ್ಕೂ ಆಯವ್ಯಯದಲ್ಲಿ ಅನುದಾನ ಮೀಸಲಿಡಲಾಗಿದೆ ಎಂದರು.
ವಿಕಲಚೇತನ ಮಕ್ಕಳಿಗೆ ನೆಮ್ಮದಿಯ ಆತ್ಮಸ್ಥೈರ್ಯದ ಬದುಕು ಸಿಗಲಿ ಎಂದು ಹಾರೈಸಿದರು.
ವಿಕಲಚೇತನರಿಗೆ ಕ್ಷೀರಭಾಗ್ಯ ಹಾಗೂ ಬಿಸಿಯೂಟ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದರು.