ಸಿಎಂ ಕುಮಾರಸ್ವಾಮಿ ಕರ್ಣ ಅಲ್ಲ, ಧರ್ಮರಾಯ

 

ಬೆಂಗಳೂರು, ಜು.14- ಮುಖ್ಯಮಂತ್ರಿ ಕುಮಾರಸ್ವಾಮಿ ಕರ್ಣ ಅಲ್ಲ, ಧರ್ಮರಾಯ. ಕುರುಕ್ಷೇತ್ರ ಯುದ್ಧ ಗೆದ್ದು ಧರ್ಮರಾಜ್ಯ ಸ್ಥಾಪನೆ ಮಾಡಿದ್ದಾರೆ. ಅವರು ಮುಖ್ಯಮಂತ್ರಿಯಾದಾಗಲೆಲ್ಲ ರಾಜ್ಯದಲ್ಲಿ ಉತ್ತಮ ಮಳೆಯಾದ ನಿದರ್ಶನಗಳಿವೆ ಎಂದು ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಶ್ಲಾಘಿಸಿದರು.
ಇಂದು ನಗರದ ಜೆಡಿಎಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ನೂತನ ಸಚಿವರು ಹಾಗೂ ಶಾಸಕರಿಗೆ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಈ ಹಿಂದೆಯೂ ರಾಜ್ಯದಲ್ಲಿ ಉತ್ತಮ ಮಳೆಯಾಗಿತ್ತು. ಈ ಬಾರಿಯೂ ಉತ್ತಮ ಮಳೆಯಾಗಿ ನಿಗದಿತ ಅವಧಿಗೂ ಮುನ್ನವೇ ಕೆಆರ್‍ಎಸ್ ಭರ್ತಿಯಾಗಿದೆ ಎಂದರು.
ರೈತರ ಸಾಲ ಮನ್ನಾ ಮಾಡಿದ್ದಾರೆ. ಹಾಗಿದ್ದರೂ ಅವರ ಲೋಪಗಳನ್ನೇ ಹುಡುಕುತ್ತಿದ್ದಾರೆ. ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ನಿಜವಾದ ಜಾತ್ಯತೀತ ನಾಯಕರು. ಯಾರ ಟೀಕೆಗೂ ಎದೆಗುಂದಬಾರದು. ಎಷ್ಟೆಲ್ಲ ಹೋರಾಟ ಮಾಡಿದರೂ ಜನ ಬಹುಮತ ನೀಡಲಿಲ್ಲ. ಆದರೂ ಈಗ ಸರ್ಕಾರ ರಚನೆಯಾದ ಮೇಲೆ ಮೂರು ತಿಂಗಳಲ್ಲೇ ಕೊಟ್ಟ ಭರವಸೆಗಳನ್ನೆಲ್ಲ ಈಡೇರಿಸಬೇಕೆಂದು ಜನ ನಿರೀಕ್ಷಿಸುತ್ತಿದ್ದಾರೆ ಎಂದು ಹೇಳಿದರು.
ಕುಮಾರಸ್ವಾಮಿಯವರು ತೆರೆದ ಪುಸ್ತಕವಿದ್ದಂತೆ. ಅವರ ರಾಜಕೀಯ ಪ್ರವೇಶವೂ ಸಹ ಅಷ್ಟೇ ಆಕಸ್ಮಿಕ. ಲೋಕಸಭೆ ಚುನಾವಣೆ ಯಾವುದೇ ಹಂತದಲ್ಲಿ ಬರಬಹುದು. ಅದಕ್ಕೆ ಎಲ್ಲ ಸಿದ್ಧತೆ ನಡೆಯಬೇಕಿದೆ. ಈ ಹಿಂದೆ ನಮ್ಮೆಲ್ಲರ ಒತ್ತಾಯದ ಮೇರೆಗೆ ಕುಮಾರಸ್ವಾಮಿಯವರು ಲೋಕಸಭಾ ಚುನಾವಣೆಯಲ್ಲೂ ಸ್ಪರ್ಧಿಸಿದ್ದರು ಎಂದು ಸ್ಮರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ