ಚಿಕ್ಕಮಗಳೂರು,ಜು.13- ಜೋಲಿಯಲ್ಲಿ ಆಟವಾಡುತ್ತಿದ್ದ ಬಾಲಕನೊಬ್ಬನ ಕೊರಳಿಗೆ ಆಕಸ್ಮಿಕವಾಗಿ ಸೀರೆ ಕೊರಳಿಗೆ ಬಿಗಿದುಕೊಂಡು ಮೃತಪಟ್ಟಿರುವ ಘಟನೆ ನಡೆದಿದೆ.
ತೇಜಸ್(11) ಮೃತಪಟ್ಟ ಬಾಲಕ. ಚಿತ್ರದುರ್ಗ ಮೂಲಕದ ಮಲ್ಲಿಕಾರ್ಜುನ ಮತ್ತು ನೇತ್ರಾವತಿ ದಂಪತಿ ಚಿಕ್ಕಮಗಳೂರಿನ ಆದರ್ಶನಗರದಲ್ಲಿ ಮನೆ ಮಾಡಿಕೊಂಡಿದ್ದರು. ಮಲ್ಲಿಕಾರ್ಜುನ ಮೂಡಿಗೆರೆ ಕೆಎಸ್ಆರ್ಟಿಸಿ ಬಸ್ ಡಿಪೆÇೀದಲ್ಲಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದು , ಈ ದಂಪತಿಗೆ ತೇಜಸ್, ದೀಪು ಎಂಬ ಇಬ್ಬರು ಮಕ್ಕಳಿದ್ದಾರೆ. ನಗರದ ಮಹರ್ಷಿ ವಿದ್ಯಾಮಂದಿರದಲ್ಲಿ ತೇಜಸ್ 6ನೇ ತರಗತಿ ಮತ್ತು ದೀಪು 1ನೇ ತರಗತಿಯಲ್ಲಿ ಓದುತ್ತಿದ್ದರು.
ನೇತ್ರಾವತಿ ತಂಗಿ ತ್ರಿವೇಣಿಗೆ 20 ದಿನದ ಮಗುವಿದ್ದು, ಬಾಣಂತನದ ಆರೈಕೆಗಾಗಿ ಅಕ್ಕನ ಮನೆಗೆ ಬಂದಿದ್ದರು. ತ್ರಿವೇಣಿ ಅವರ ಪುಟ್ಟ ಮಗುವಿವಾಗಿ ತಾರಸಿಗೆ ಸೀರೆಯಿಂದ ಜೋಲಿ ಕಟ್ಟಲಾಗಿತ್ತು.
ಪ್ರತಿದಿನ ತೇಜಸ್ ಶಾಲೆಯಿಂದ ಬಂದು ಜೋಲಿಯಲ್ಲಿ ಆಟವಾಡುತ್ತಿದ್ದ ಆತ ಎಂದಿನಂತೆ ನಿನ್ನೆಯೂ ಜೋಲಿಯಲ್ಲಿ ಕೂತು ಆಟವಾಡುವಾಗ ಸೀರೆ ಆಕಸ್ಮಿಕವಾಗಿ ತೇಜಸ್ನ ಕೊರಳಿಗೆ ಸುತ್ತಿಕೊಂಡು ಉರುಳಾಗಿ ಪರಿಣಮಿಸಿದೆ.
ಕೆಲಸದಲ್ಲಿ ಮಗ್ನರಾಗಿದ್ದ ನೇತ್ರಾವತಿ ಬಂದು ನೋಡುವಷ್ಟರಲ್ಲಿ ತೇಜಸ್ ಸೀರೆಯ ಗಂಟಿಗೆ ಸಿಲುಕಿ ನಿತ್ರಾಣಗೊಂಡಿದ್ದ. ಆತನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ತೇಜಸ್ ಮೃತಪಟ್ಟಿದ್ದ. ಜಿಲ್ಲಾಸ್ಪತ್ರೆಯ ಮುಂದೆ ಸಂಬಂಧಿಕರ ರೋಧನ ಮುಗಿಲು ಮುಟ್ಟಿತ್ತು. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.