ಬೆಂಗಳೂರು, ಜು.13- ಸರ್ಕಾರದ ನೀತಿ-ನಿಯಮಗಳನ್ನು ರೂಪಿಸುವುದು ಹಾಗೂ ಪ್ರಮುಖ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಐಎಎಸ್ ಅಧಿಕಾರಿಗಳ ಕೊರತೆ ಇರುವುದರಿಂದ ರಾಜ್ಯದ ಆಡಳಿತದ ಮೇಲೆ ಹೆಚ್ಚಿನ ಪರಿಣಾಮ ಬೀರುವಂತಾಗಿದೆ.
ರಾಜ್ಯದಲ್ಲಿ ಶೇ.20ರಷ್ಟು ಐಎಎಸ್ ಅಧಿಕಾರಿಗಳ ಕೊರತೆ ಇರುವುದರಿಂದ ಕೆಲವು ಅಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ. ಇದರ ಪರಿಣಾಮ ಸರ್ಕಾರದ ಉದ್ದೇಶಿತ ಕಾರ್ಯಕ್ರಮಗಳು ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ.
ಕೆಲವು ಅಧಿಕಾರಿಗಳು ಒಂದಕ್ಕಿಂತಲೂ ಹೆಚ್ಚು ಅಂದರೆ ಮೂರು ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ. ಹೀಗಾಗಿ ಯಾವ ಇಲಾಖೆಯಲ್ಲೂ ಸಮರ್ಪಕವಾಗಿ ಕೆಲಸ ನಿರ್ವಹಿಸದೆ ಸಂಕಷ್ಟದಲ್ಲಿಯೇ ಸಮಯ ನೂಕುತ್ತಿದ್ದಾರೆ.
ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ (ಡಿಪಿಎಆರ್) ಪ್ರಕಾರ ಕರ್ನಾಟಕಕ್ಕೆ ಕೇಂದ್ರದಿಂದ 253 ಐಎಎಸ್ ಅಧಿಕಾರಿಗಳು ಮಂಜೂರಾಗಬೇಕು. ಆದರೂ ಅಷ್ಟೂ ಪ್ರಮಾಣದ ಹುದ್ದೆಗಳನ್ನು ಕೇಂದ್ರ ಮಂಜೂರು ಮಾಡಿಲ್ಲ.
ಈಗಾಗಲೇ 61 ಹುದ್ದೆಗಳು ಖಾಲಿಯಾಗಿದ್ದರೂ ಇದಕ್ಕೂ ಸಹ ಕೇಂದ್ರದಿಂದ ಈವರೆಗೂ ಮಂಜೂರಾತಿ ದೊರೆತಿಲ್ಲ.
ಸುಮಾರು 25 ಐಎಎಸ್ ಅಧಿಕಾರಿಗಳು ಒಂದಕ್ಕಿಂತಲೂ ಹೆಚ್ಚು ಹುದ್ದೆಗಳನ್ನು ನಿಭಾಯಿಸುತ್ತಿದ್ದಾರೆ, ಇನ್ನು ಕೆಲವು ಅಧಿಕಾರಿಗಳು ಮೂರು ಇಲಾಖೆಗಳನ್ನು ನಿಭಾಯಿಸುತ್ತಿರುವುದರಿಂದ ಸರ್ಕಾರಿ ಯೋಜನೆಗಳು ಕಾಲ ಮಿತಿಯೊಳಗೆ ಅನುಷ್ಠಾನವಾಗುತ್ತಿಲ್ಲ.
ಉದಾಹರಣೆಗೆ ಹಿರಿಯ ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ಅವರು ಮೂರು ಹುದ್ದೆಗಳನ್ನು ನಿಭಾಯಿಸುತ್ತಿದ್ದಾರೆ. ಪ್ರಸ್ತುತ ಅವರು ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ(ಬಿಡಿಎ)ದ ಆಯುಕ್ತರು ಹಾಗೂ ಕೆಎಂಎಫ್‍ನ ವ್ಯವಸ್ಥಾಪಕ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದರ ಜೊತೆಗೆ ಕೆಲವು ಇಲಾಖೆಯ ಪ್ರಮುಖ ಹುದ್ದೆಗಳಾದ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಹಾಗೂ ಬೇರೆ ಇಲಾಖೆಗಳ ಹೆಚ್ಚುವರಿ ಹುದ್ದೆಗಳನ್ನು ನಿಭಾಯಿಸಬೇಕಾದ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ.
ಕರ್ನಾಟಕದ ಸೇವೆಗೆ ಬಂದಿದ್ದ 16 ಮಂದಿ ಐಎಎಸ್ ಅಧಿಕಾರಿಗಳು ಕೇಂದ್ರ ಸೇವೆಗೆ ಮರಳಿರುವುದರಿಂದ ಈ ಹುದ್ದೆಗಳು ಕೂಡ ಹಾಗೆಯೇ ಉಳಿದಿವೆ. ಕೇಂದ್ರ ಸೇವೆಗೆ ನಿಯೋಜನೆಗೊಂಡವರು ಪುನಃ ರಾಜ್ಯದತ್ತ ಮುಖ ಮಾಡುವುದಿಲ್ಲ. ಕಡೆ ಪಕ್ಷ ಖಾಲಿ ಇರುವ ಹುದ್ದೆಗಳನ್ನು ಕಾಲ ಮಿತಿಯೊಳಗೆ ತುಂಬುವುದರ ಬಗ್ಗೆ ಸರ್ಕಾರ ಕೂಡ ಗಮನಹರಿಸಿಲ್ಲ. ಇನ್ನು ಕೇಂದ್ರ ಸರ್ಕಾರವೂ ಕೂಡ ರಾಜ್ಯ ಸರ್ಕಾರ ಬೇಡಿಕೆ ಇಟ್ಟಷ್ಟು ಹುದ್ದೆಗಳನ್ನು ಮಂಜೂರು ಮಾಡದಿರುವುದು ಮತ್ತೊಂದು ಕಾರಣ.
ರಾಜ್ಯದಲ್ಲಿ ಐಎಎಸ್ ಅಧಿಕಾರಿಗಳ ಕೊರತೆ ಇರುವುದು ನಿಜ. ಐಎಎಸ್ ಅಧಿಕಾರಿಗಳ ಕೊರತೆಯಿರುವುದರಿಂದ ಇರುವ ಅಧಿಕಾರಿಗಳಿಗೇ ಹೆಚ್ಚಿನ ಜವಾಬ್ದಾರಿಗಳನ್ನು ನೀಡಲಾಗುತ್ತಿದೆ. ಪ್ರಧಾನ ಕಾರ್ಯದರ್ಶಿ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿರುವ 20 ಹಿರಿಯ ಐಎಎಸ್ ಅಧಿಕಾರಿಗಳಿಗೆ 1ಕ್ಕಿಂತಲೂ ಹೆಚ್ಚಿನ ಇಲಾಖೆಗಳ ಜವಾಬ್ದಾರಿಗಳನ್ನು ನೀಡಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಖಾಲಿಯಿರುವ ಹುದ್ದೆಗಳಿಗೆ ಅಧಿಕಾರಿಗಳನ್ನು ಕೇಂದ್ರ ಸರ್ಕಾರ ನೇಮಕ ಮಾಡಬೇಕು. ಈ ಬಗ್ಗೆ ರಾಜ್ಯ ಸರ್ಕಾರ ಪ್ರತೀ ವರ್ಷ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತಲೇ ಇರುತ್ತದೆ. ಪ್ರಸಕ್ತ ವರ್ಷ ಕೂಡ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಮನವಿ ಮಾಡಿಕೊಂಡಿತ್ತು. ಹುದ್ದೆಗಳು ಪೂರ್ಣಗೊಳ್ಳದ ಕಾರಣ, ಇರುವ ಅಧಿಕಾರಿಗಳಿಗೇ ಹೆಚ್ಚಿನ ಜವಾಬ್ದಾರಿಗಳನ್ನು ನೀಡಲಾಗಿದೆ ಡಿಪಿಎಆರ್ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅಧಿಕಾರಿಗಳ ಕೊರತೆಯನ್ನು ನಿಭಾಯಿಸುವ ಸಲುವಾಗಿ ರಾಜ್ಯ ಸರ್ಕಾರ ಅರ್ಹ ಕೆಎಎಸ್ ಅಧಿಕಾರಿಗಳಿಗೆ ಐಎಎಸ್ ರ್ಯಾಂಕ್‍ಗಳನ್ನು ನೀಡಲು ಆರಂಭಿಸಿದೆ. ಈ ವರ್ಷ 81 ಕೆಎಎಸ್ ಅಧಿಕಾರಿಗಳಿಗೆ ಬಡ್ತಿ ನೀಡಲಾಗಿದೆ. ಅಧಿಕಾರಿಗಳ ಬರವಿದ್ದರೂ , ಪ್ರತೀ ವರ್ಷ ರಾಜ್ಯಕ್ಕೆ 10-12 ಅಧಿಕಾರಿಗಳನ್ನಷ್ಟೇ ಕೇಂದ್ರ ನೇಮಕ ಮಾಡುತ್ತಿದೆ. ಇದರಿಂದ ಆಡಳಿತ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳ ಕೊರತೆ ನೀಗದೆ ಸಮಸ್ಯೆ ಸಮಸ್ಯೆಯಾಗಿಯೇ ಉಳಿಯುತ್ತಿದೆ ಎಂದು ತಿಳಿಸಿದ್ದಾರೆ.