ಇಂದಿರಾ ಕ್ಯಾಂಟೀನ್ ಅವ್ಯವಹಾರ ಪ್ರಕರಣ: ಚರ್ಚೆಗೆ ಅವಕಾಶಕ್ಕೆ ಪಟ್ಟು

 

ಬೆಂಗಳೂರು,ಜು.13-ಇಂದಿರಾ ಕ್ಯಾಂಟೀನ್‍ನಲ್ಲಿ ನಡೆದಿರುವ ಅವ್ಯವಹಾರ ಪ್ರಕರಣದ ಬಗ್ಗೆ ಸದನದಲ್ಲಿ ಚರ್ಚಿಸಲು ಅವಕಾಶ ನೀಡಬೇಕೆಂದು ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಪಟ್ಟು ಹಿಡಿದ ಕಾರಣ ಕೆಲಕಾಲ ಆಡಳಿತ ಮತ್ತು ಪ್ರತಿಪಕ್ಷಗಳ ಸದ್ಯಸರ ನಡುವೆ ವಿಧಾನಸಭೆಯಲ್ಲಿಂದು ಮಾತಿನ ಚಕಮಕಿ ನಡೆಯಿತು.
ಖಾಸಗಿ ಮಸೂದೆ ಮಂಡಿಸಲು ಸಚಿವ ಕೃಷ್ಣೇಭೆರೇಗೌಡ ಮುಂದಾಗುತ್ತಿದ್ದಂತೆ ಎಸ್.ಎ.ರಾಮದಾಸ್, ನನಗೆ ಚರ್ಚೆಗೆ ಅವಕಾಶ ಕೊಡುವುದಾಗಿ ಸಭಾಧ್ಯಕ್ಷರು ಹೇಳಿದ್ದರು. ಇದೀಗ ದಾಖಲೆÉಗಳ ಸಮೇತ ಸದನಕ್ಕೆ ಬಂದಿದ್ದೇನೆ. ಚರ್ಚೆಗೆ ಅವಕಾಶ ಕೊಡಿ ಎಂದು ಪಟ್ಟು ಹಿಡಿದರು.
ಈಗಾಗಲೇ ನಿಮ್ಮ ದಾಖಲೆಗಳನ್ನು ಸಭಾಧ್ಯಕ್ಷರು ಪರಿಶೀಲಿಸಿ ತಿರಸ್ಕರಿಸಿದ್ದಾರೆ. ಒಂದು ಬಾರಿ ತಿರಸ್ಕøತವಾದ ಮೇಲೆ ಪುನಃ ಅದೇ ವಿಷಯದ ಬಗ್ಗೆ ಚರ್ಚಿಸುವುದು ಸರಿಯಲ್ಲ. ಹಿರಿಯರಾದ ನಿಮಗೆ ಇದೆಲ್ಲ ಗೊತ್ತಿರಬೇಕಲ್ಲವೇ ಎಂದು ಸಭಾಪತಿ ಸ್ಥಾನದಲ್ಲಿದ್ದ ಉಪಸಭಾಪತಿ ಕೃಷ್ಣರೆಡ್ಡಿ ಸಲಹೆ ಮಾಡಿದರು.
ನನಗೆ ನಿಯಮ 69ರಡಿ ಚರ್ಚೆಗೆ ಅವಕಾಶ ನೀಡುವುದಾಗಿ ಸಭಾಧ್ಯಕ್ಷರು ಹೇಳಿದ್ದರು. ಇಂದು ನಾನು ದಾಖಲೆಗಳ ಸಮೇತ ಸದನಕ್ಕೆ ಬಂದಿದ್ದೇನೆ. ಏಕಾಏಕಿ ಚರ್ಚೆಗೆ ಅವಕಾಶ ಕೊಡುವುದಿಲ್ಲ ಎಂದರೆ ಹೇಗೆ, ಸದನದ ಸದಸ್ಯರ ವಾಕ್ ಸ್ವಾತಂತ್ರವನ್ನು ಮೊಟಕುಗೊಳಿಸುವುದು ಸರಿಯೇ ಎಂದು ರಾಮದಾಸ್ ಅಸಮಾಧಾನ ವ್ಯಕ್ತಪಡಿಸಿದರು.
ನಿಮಗೆ ವಾಕ್ ಸ್ವಾತಂತ್ರ್ಯ ಇರುವುದನ್ನು ಯಾರೊಬ್ಬರೂ ಮೊಟಕು ಗೊಳಿಸುವುದಿಲ್ಲ. ನಿಮ್ಮ ವಾಕ್ ಸ್ವಾತಂತ್ರ್ಯ ಸದುಪಯೋಗವಾಗಬೇಕೆ ಹೊರತು ದುರುಪಯೋಗವಾಗಬಾರದು. ಸಭಾಧ್ಯಕ್ಷರು ತಿರಸ್ಕರಿಸಿದ ಮೇಲೆ ಅದೇ ವಿಷಯದ ಮೇಲೆ ಚರ್ಚೆ ಮಾಡುತ್ತೇನೆಂದು ಪಟ್ಟು ಹಿಡಿದರೆ ನಾನು ಅವಕಾಶ ಕೊಡುವುದಿಲ್ಲ. ಈ ರೀತಿ ಕಾರ್ಯಕಲಾಪಗಳಗೆ ಅಡ್ಡಿ ಪಡಿಸುವುದು ಯಾರಿಗೂ ಶೋಭೆ ತರುವುದಿಲ್ಲ ಎಂದು ಸಿಡಿಮಿಡಿಗೊಂಡರು.
ಈ ಹಂತದಲ್ಲಿ ರಾಮದಾಸ್ ಮಾತು ಮುಂದುವರೆಸಿದಾಗ ಕೃಷ್ಣೇಬೈರೇಗೌಡ ಸೇರಿದಂತೆ ಮತ್ತಿತರ ಸದಸ್ಯರು ಸಭಾಪತಿಗಳ ಪೀಠಕ್ಕೆ ನೀವು ಅಗೌರವ ಕೊಡತ್ತಿದ್ದೀರಿ. ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ಮೊದಲು ಪೀಠಕ್ಕೆ ಗೌರವ ಕೊಡುವುದನ್ನು ಕಲಿತುಕೊಳ್ಳಿ. ಹಿರಿಯರಾದ ನೀವು ಕಿರಿಯರಿಗೆ ಮಾರ್ಗದರ್ಶನವಾಗಬೇಕು. ಸಭಾಧ್ಯಕ್ಷರು ನಿಮ್ಮ ಕಡತವನ್ನು ಪರಿಶೀಲಿಸಿ ಚರ್ಚೆಗೆ ಅರ್ಹವಲ್ಲ ಎಂದು ಹೇಳಿದ ಮೇಲೆ ಪದೇ ಪದೇ ಕಲಾಪಕ್ಕೆ ಅಡ್ಡಿಪಡಿಸಿದರೆ ಹೇಗೆ ಎಂದು ಪ್ರಶ್ನಿಸಿದರು.
ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಆಗ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಧ್ಯಪ್ರವೇಶಿಸಿ ಸದಸ್ಯರು ನೀಡಿರುವ ಕಡತವನ್ನು ಪರಿಶೀಲಿಸಿ ಅದು ಚರ್ಚೆಗೆ ಅರ್ಹವೆಂದು ನಿಮಗೆ ಮನವರಿಕೆಯಾದರೆ ವಿಷಯ ಪ್ರಸ್ತಾವನೆಗೆ ಅವಕಾಶ ನೀಡಬೇಕು.
ಈ ರೀತಿ ಸದಸ್ಯರೊಬ್ಬರ ಹಕ್ಕನ್ನು ಮೊಟಕಗೊಳಿಸುವುದು ಸರಿಯಲ್ಲ. ಆಗಲೇ ಇದು ತಿರಸ್ಕøತವಾಗಿರುವುದರಿಂದ ಪುನಃ ಅದೇ ವಿಷಯಕ್ಕೆ ಚರ್ಚೆಗೆ ಅವಕಾಶವಿಲ್ಲ ಎಂದು ಉಪಸಭಾಪತಿ ಹೇಳುತ್ತಿದ್ದಂತೆ ರಾಮದಾಸ್ ಸದನದಿಂದ ಹೊರನಡೆದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ