ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿಗೆ ಮೇಜರ್ ಸರ್ಜರಿ

 

ಬೆಂಗಳೂರು, ಜು.13- ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿಗೆ ಮೇಜರ್ ಸರ್ಜರಿ ಮಾಡಲು ನೂತನ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಅವರು ನಿರ್ಧರಿಸಿದ್ದಾರೆ.
ತಾಲೂಕು ಮಟ್ಟದಿಂದ ಎಲ್ಲ ಪದಾಧಿಕಾರಿಗಳನ್ನು ಬದಲಾವಣೆ ಮಾಡುವ ಸಂಬಂಧ ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಸ್ತುತ ಪಕ್ಷಕ್ಕಾಗಿ ದುಡಿಯುವವರ ಅಗತ್ಯತೆ ಇದ್ದು, ಅಂತಹವರ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕಾಗಿದೆ. ಅದಕ್ಕಾಗಿ ಯುವ ಪಡೆಯೊಂದನ್ನು ಸಜ್ಜುಗೊಳಿಸಬೇಕಿದೆ.
ಬಹು ವರ್ಷಗಳಿಂದ ಬೇರು ಬಿಟ್ಟಿರುವ ಪದಾಧಿಕಾರಿಗಳನ್ನು ಬದಲಾಯಿಸಿ ನೂತನ ಪದಾಧಿಕಾರಿಗಳನ್ನು ನೇಮಿಸಲು ಮುಂದಾಗಿದ್ದು, ಡಿಸಿಸಿ ಅಧ್ಯಕ್ಷರು, ನಾಯಕರುಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಎಂಟು ವರ್ಷಗಳ ಕಾಲ ಸುದೀರ್ಘ ಅವಧಿಗೆ ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಆದರೆ, ಈಗ ನೂತನ ಅಧ್ಯಕ್ಷರಾಗಿರುವ ದಿನೇಶ್ ಅವರು ಬಹುತೇಕ ಪದಾಧಿಕಾರಿಗಳನ್ನು ಬದಲಾಯಿಸಿ ಹೊಸ ಪದಾಧಿಕಾರಿಗಳನ್ನು ನೇಮಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ರಾಜ್ಯ ಕಾಂಗ್ರೆಸ್ ವರಿಷ್ಠರು ಹಾಗೂ ಹೈಕಮಾಂಡ್ ವರಿಷ್ಠರ ಜತೆ ಕೂಡ ಮಾತುಕತೆ ನಡೆಸಿದ್ದಾರೆ. ಲೋಕಸಭೆ ಚುನಾವಣೆಯನ್ನು ಪರಿಣಾಮಕಾರಿಯಾಗಿ ಎದುರಿಸಬೇಕಾಗಿದೆ. ಅದಕ್ಕಾಗಿ ಸಮರ್ಥವಾದ ಪಡೆಯನ್ನು ರಚಿಸಬೇಕಿದೆ. ಹೊಸ ಹೊಸ ಚಿಂತನೆಗಳು, ಆಲೋಚನೆಗಳನ್ನು ಮಾಡಬೇಕಾದ ತಂಡದ ಅಗತ್ಯವಿದೆ. ಈ ನಿಟ್ಟಿನಲ್ಲಿ ದಿನೇಶ್ ಗುಂಡೂರಾವ್ ಅವರು ಚಿಂತಿಸಿದ್ದು, ಆಮೂಲಾಗ್ರ ಬದಲಾವಣೆ ಮಾಡಬೇಕೆಂದು ಮುಂದಾಗಿದ್ದಾರೆ.
ಎಐಸಿಸಿ ಅಧ್ಯಕ್ಷರಾದ ರಾಹುಲ್‍ಗಾಂಧಿ ಅವರು ಕೂಡ ಯುವಕರಿಗೆ ಹೆಚ್ಚು ಆದ್ಯತೆ ನೀಡಬೇಕೆಂಬ ನಿಟ್ಟಿನಲ್ಲಿ ದಿನೇಶ್ ಗುಂಡೂರಾವ್ ಅವರಿಗೆ ಕೆಪಿಸಿಸಿ ಅಧ್ಯಕ್ಷತೆಯ ಹೊಣೆಗಾರಿಕೆಯನ್ನು ನೀಡಿದ್ದಾರೆ.
ಹಾಗಾಗಿ ರಾಜ್ಯ ಕಾಂಗ್ರೆಸ್‍ನಲ್ಲಿ ಯುವಕರಿಗೆ ಹೆಚ್ಚು ಆದ್ಯತೆ ನೀಡಬೇಕೆಂಬ ನಿಟ್ಟಿನಲ್ಲಿ ದಿನೇಶ್ ಗುಂಡೂರಾವ್ ಅವರು ಕೂಡ ಮುಂದಾಗಿದ್ದಾರೆ.
ಕೆಪಿಸಿಸಿ ಪದಾಧಿಕಾರಿಗಳನ್ನು ಪುನರ್ ರಚಿಸಿದರೆ ಯುವಕರಿಗೆ ಹೆಚ್ಚು ಆದ್ಯತೆ ಸಿಗಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ