
ಬೆಂಗಳೂರು, ಜು.12-ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಜೆಟ್‍ನಲ್ಲಿ ಉತ್ತರ ಕರ್ನಾಟಕವನ್ನು ಕಡೆಗಣಿಸಿರುವುದನ್ನು ಕೂಡಲೇ ಸರಿಪಡಿಸದಿದ್ದರೆ ಕರ್ನಾಟಕ ಬಂದ್‍ನಂತಹ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೂಡಲೇ ಪರಿಸ್ಥಿತಿ ನಿಭಾಯಿಸಲು ಉತ್ತರ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್ ಅಥವಾ ಇನ್ನು ಹೆಚ್ಚಿನ ಅನುದಾನವನ್ನು ಒದಗಿಸಬೇಕು. ಈ ಭಾಗದವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರದ ಧೋರಣೆ ಹಾಗೂ ಉತ್ತರ ಕರ್ನಾಟಕಕ್ಕೆ ಮಾಡಿರುವ ಅನ್ಯಾಯ ಖಂಡಿಸಿ ಇದೇ 17ರಂದು ದಾವಣಗೆರೆ-ಹುಬ್ಬಳ್ಳಿ, ಬೆಳಗಾವಿ, ಕಲ್ಬುರ್ಗಿ ಜಿಲ್ಲೆಗಳ ಜಿಲ್ಲಾ ಕಚೇರಿಗಳ ಮುಂದೆ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದರು.
ರಾಜ್ಯಸರ್ಕಾರ ಉತ್ತರ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡಿದೆ. ನೀರಾವರಿ, ರಸ್ತೆ, ಗುಡಿ ಕೈಗಾರಿಕೆ,ನೇಕಾರರಿಗೆ ಸೂಕ್ತ ಸೌಲಭ್ಯ ಕಲ್ಪಿಸಿಲ್ಲ. ಈ ಬಾರಿಯ ಬಜೆಟ್‍ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದರು.
ಕರ್ನಾಟಕದ ಏಕೀಕರಣವಾದಗಿನಿಂದಲೂ ಇದೇ ಪರಿಸ್ಥಿತಿ ಮುಂದುವರೆದಿದೆ. ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲ ಪಕ್ಷಗಳು ಉತ್ತರ ಕರ್ನಾಟಕವನ್ನು ನಿರಂತರವಾಗಿ ನಿರ್ಲಕ್ಷಿಸಿವೆ. ಹಾಗಾಗಿ ಇದೀಗ ಪ್ರತ್ಯೇಕ ರಾಜ್ಯದ ಕೂಗು ಕೇಳಿಬಂದಿದೆ.
ಪ್ರಾದೇಶಿಕ ಅಸಮೋತಲನ ಉಂಟಾಗದಂತೆ ಎಲ್ಲ ಕ್ಷೇತ್ರಗಳ ಅಭಿವೃದ್ದಿಗೆ ಸರ್ಕಾರ ಮುಂದಾಗಬೇಕು. ರಾಜ್ಯದಲ್ಲಿ ಎದುರಾಗಿರುವ ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸಲು ನಮ್ಮ ಹೋರಾಟ ಮುಂದುವರೆಯುತ್ತದೆ. ಜೈಲಿಗೆ ಹೋಗಲು ನಾವು ಸಿದ್ದ. ಆದರೆ ಉತ್ತರ ಕರ್ನಾಟಕದ ಜನ ಮೂಲಭೂತ ಸೌಲಭ್ಯಗಳಿಂದಲೂ ವಂಚಿತರಾಗಿದ್ದು, ಅವರಿಗೆ ನ್ಯಾಯ ದೊರಕಿಸಿಕೊಡಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಾ.ರಾ.ಗೋವಿಂದು,ಪ್ರವೀಣ್‍ಕುಮಾರ್ ಶೆಟ್ಟಿ,ಶಿವರಾಮೇಗೌಡ ಮತ್ತಿತರರು ಉಪಸ್ಥಿತರಿದ್ದರು.