ಬೆಂಗಳೂರು, ಜು.12- ಬಜೆಟ್ ಮೇಲಿನ ಚರ್ಚೆ ಮುಂದುವರೆಸಲು ಅವಕಾಶನೀಡಬೇಕೆಂದು ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಬೈರೇಗೌಡ ಅವರು ಬಳಸಿದ ಶಬ್ದವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಬಿಜೆಪಿ ಶಾಸಕ ಎಸ್.ಎ.ರಾಮ್‍ದಾಸ್ ಕೆಲ ಕಾಲ ವಿಧಾನಸಭೆಯಲ್ಲಿ ಧರಣಿ ನಡೆಸಿದರು.
ನಿನ್ನೆಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಇಂದಿರಾಕ್ಯಾಂಟಿನ್ ವಿಚಾರದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಆರೋಪ ಕುರಿತು ರಾಮ್‍ದಾಸ್ ಪ್ರಸ್ತಾಪ ಮಾಡಿದ್ದರು. ಆ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಶಾಸಕರ ನಡುವೆ ವಾಗ್ವಾದ ಉಂಟಾಗಿ ಧರಣಿ ಮಾಡಿದ್ದರು. ಇಂದೂ ಕೂಡ ಇದೇ ವಿಚಾರ ಪ್ರಸ್ತಾಪವಾದಾಗ ದಾಖಲೆಕೊಟ್ಟು ನಿಯಮಾವಳಿ ಪ್ರಕಾರ ನೋಟಿಸ್ ನೀಡಿದರೆ ಚರ್ಚೆಗೆ ಅವಕಾಶಕೊಡುವುದಾಗಿ ಸ್ಪೀಕರ್ ಪ್ರಕಟಿಸಿದ್ದರು.
ಆನಂತರ ಬಜೆಟ್ ಮೇಲಿನ ಚರ್ಚೆ ಮುಂದುವರೆಸಲು ರಾಮ್‍ದಾಸ್ ಪಟ್ಟು ಹಿಡಿದರು. ಸಭಾಧ್ಯಕ್ಷರ ಪೀಠದಲ್ಲಿದ್ದ ಉಪಸಭಾಧ್ಯಕ್ಷ ಎಂ.ಕೃಷ್ಣಾರೆಡ್ಡಿ, ಈಗಾಗಲೇ ಸಭಾಧ್ಯಕ್ಷರು ಸ್ಪಷ್ಟವಾಗಿ ಹೇಳಿದ್ದಾರೆ. ಈ ವಿಚಾರದ ಚರ್ಚೆ ಮುಗಿದಿದೆ. ಬಜೆಟ್ ಮೇಲಿನ ನಿಮ್ಮ ಚರ್ಚೆ ಮುಕ್ತಾಯವಾಗಿದೆ ಎಂದು ರಾಮ್‍ದಾಸ್ ಅವರಿಗೆ ತಿಳಿಸಿದರು.
ಆಗ ಪಟ್ಟು ಬಿಡದ ರಾಮ್‍ದಾಸ್ ಅವರು, ಕೃಷ್ಣಬೈರೇಗೌಡರು ಬಳಸಿದ ಶಬ್ಧವನ್ನು ತೆಗೆಯಬೇಕು. ಇಲ್ಲವೇ ಬಜೆಟ್ ಮೇಲಿನ ಚರ್ಚೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದರು. ಆಗ ಉಪಸಭಾಧ್ಯಕ್ಷರು, ಪ್ರತಿಯೊಬ್ಬರಿಗೂ ವಾಕ್ ಸ್ವಾತಂತ್ರ್ಯವಿದೆ. ಕಾರ್ಯಕಲಾಪಗಳಿಗೆ ಅಡ್ಡಿಪಡಿಸಬಾರದು. ಸಭಾಧ್ಯಕ್ಷರ ಆದೇಶಕ್ಕೆ ಗೌರವಕೊಡಬೇಕು ಎಂದಾಗ, ಬಿಜೆಪಿಯ ಬಸವರಾಜಬೊಮ್ಮಾಯಿ, ಸಿ.ಟಿ.ರವಿ, ಎಂ.ಪಿ.ರೇಣುಕಾಚಾರ್ಯ ರಾಮ್‍ದಾಸ್ ಬೆಂಬಲಕ್ಕೆ ನಿಂತರು.
ಪ್ರತಿಯಾಗಿ ಜೆಡಿಎಸ್ ಶ್ರವಣಬೆಳಗೊಳ ಶಾಸಕ ಸಿ.ಎನ್.ಬಾಲಕೃಷ್ಣ, ಕಾಂಗ್ರೆಸ್‍ನ ಪಿ.ಟಿ.ಪರಮೇಶ್ವರ್ ನಾಯಕ್ ಆಕ್ಷೇಪ ವ್ಯಕ್ತಪಡಿಸಿದರು. ಕೆಲ ಕಾಲ ವಾಗ್ವಾದ, ಮಾತಿನಚಕಮಕಿ ನಡೆಯಿತು.
ಉಪಸಭಾಧ್ಯಕ್ಷರು ಚರ್ಚೆಗೆ ಅವಕಾಶ ನೀಡದೆ ಇದ್ದಾಗ ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಗಿಳಿದು ರಾಮ್‍ದಾಸ್ ಧರಣಿ ನಡೆಸಿದರು.
ಸಭಾಧ್ಯಕ್ಷ ರಮೇಶ್‍ಕುಮಾರ್ ಪೀಠಕ್ಕೆ ಆಗಮಿಸುತ್ತಿದ್ದಂತೆ ರಾಮ್‍ದಾಸ್ ಧರಣಿ ಕೈ ಬಿಟ್ಟು ಸ್ವ ಸ್ಥಾನಕ್ಕೆ ಮರಳಿದರು. ನಂತರ ಬಜೆಟ್ ಮೇಲಿನ ಚರ್ಚೆಗೆ ಸ್ಪೀಕರ್ ಅವಕಾಶ ಮಾಡಿಕೊಟ್ಟರು.