ವಿಧಾನಸಭೆ ಅಧಿವೇಶನ ಒಂದು ದಿನ ವಿಸ್ತರಣೆ

 

ಬೆಂಗಳೂರು, ಜು.12- ವಿಧಾನಸಭೆ ಅಧಿವೇಶನವನ್ನು ನಾಳೆವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಸಭಾಧ್ಯಕ್ಷ ರಮೇಶ್‍ಕುಮಾರ್ ಪ್ರಕಟಿಸಿದರು.
ಸದನದ ಕಾರ್ಯಕಲಾಪಗಳ ಸಲಹಾ ಸಮಿತಿ ತೀರ್ಮಾನದಂತೆ ನಾಳೆಯೂ ಕೂಡ ಅಧಿವೇಶನ ನಡೆಸಲಾಗುವುದು. ವಿರೋಧ ಪಕ್ಷದ ನಾಯಕರು ಬಜೆಟ್ ಮೇಲಿನ ಚರ್ಚೆಯಲ್ಲಿ ಐದಾರು ಶಾಸಕರು ಮಾತನಾಡಬೇಕು ಎಂದಿದ್ದಾರೆ. ಬಜೆಟ್ ಮೇಲಿನ ಚರ್ಚೆಗೆ ಮಧ್ಯಾಹ್ನದವರೆಗೂ ಅವಕಾಶ ನೀಡಲಾಗುವುದು. ಭೋಜನ ವಿರಾಮದ ನಂತರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಉತ್ತರ ನೀಡಲಿದ್ದಾರೆ. ಉಳಿದ ಕಾರ್ಯಕಲಾಪಗಳನ್ನು ನಾಳೆ ನಡೆಸೋಣ ಎಂದು ಸದನಕ್ಕೆ ತಿಳಿಸಿದರು.
ಇದಕ್ಕೂ ಮೊದಲು ವಿಧಾನಸಭೆ ಅಧಿವೇಶನವನ್ನು ನಾಳೆ ವರೆಗೂ ಮುಂದುವರೆಸುವಂತೆ ಬಿಜೆಪಿ ಸದಸ್ಯರು ವಿಧಾನಸಭೆಯಲ್ಲಿ ಒತ್ತಾಯಿಸಿದರು.
ಇಂದು ಬೆಳಗ್ಗೆ ಸದನ ಸಮಾವೇಶಗೊಂಡಾಗ ಬಿಜೆಪಿಯ ಹಿರಿಯ ಶಾಸಕ ಗೋವಿಂದಕಾರಜೋಳ ಅವರು, ರಾಜ್ಯದಲ್ಲಿ ಇತ್ತೀಚೆಗೆ ಬಿದ್ದ ಅತಿಯಾದ ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ಕೆಲವೆಡೆ ಬರಪರಿಸ್ಥಿತಿ ಇದೆ. ಬಜೆಟ್ ಮೇಲೆ ಇನ್ನೂ ಹೆಚ್ಚಿನ ಶಾಸಕರು ಚರ್ಚೆ ಮಾಡಬೇಕಾಗಿದ್ದು, ಅಧಿವೇಶನವನ್ನು ಮುಂದುವರೆಸಬೇಕು ಎಂದು ಮನವಿ ಮಾಡಿದರು.
ಈ ಹಂತದಲ್ಲಿ ಮಧ್ಯ ಪ್ರವೇಶ ಮಾಡಿದ ಸಭಾಧ್ಯಕ್ಷ ರಮೇಶ್‍ಕುಮಾರ್ ಅವರು, ಅಧಿವೇಶನ ಮುಂದುವರಿಕೆಗೆ ವಿರೋಧ ವಿಲ್ಲ. ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಲಾಗದು, ಸಭಾನಾಯಕರು ಹಾಗೂ ಪ್ರತಿಪಕ್ಷದ ನಾಯಕರನ್ನೊಳಗೊಂಡ ಸದನದ ಸಲಹಾ ಸಮಿತಿಯಲ್ಲಿ ಚರ್ಚಿಸಿ ತೀರ್ಮಾನ ಮಾಡೋಣ. ಅಲ್ಲಿಯವರೆಗೆ ಶಾಸನ ರಚನಾ ಕಲಾಪ ನಡೆಸಲು ಅವಕಾಶ ನೀಡಿ ಎಂದು ತಿಳಿಸಿದರು.
ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಸಾಕಷ್ಟು ಹೊಸ ಶಾಸಕರು ಕೂಡ ಬಜೆಟ್ ಮೇಲೆ ಮಾತನಾಡಬೇಕಾಗಿದೆ. ಇಡೀ ದಿನ ಚರ್ಚೆಯಾಗಲಿ. ನಾಳೆ ಸರ್ಕಾರ ಉತ್ತರ ನೀಡಲಿ ಎಂದರು.
ಇದಕ್ಕೆ ಬಿಜೆಪಿಯ ಹಲವು ಸದಸ್ಯರು ದನಿಗೂಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ