ಬೆಂಗಳೂರು, ಜು.12- 2017-18ನೆ ಸಾಲಿನ ರಾಜ್ಯ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರ ಹಾಗೂ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ವರ್ಗಾವಣೆ ಪ್ರಕ್ರಿಯೆಯನ್ನು ಕೌನ್ಸಿಲಿಂಗ್ ಮೂಲಕ ನಡೆಸಲು ಮುಂದಿನ 15 ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ವಿಧಾನ ಪರಿಷತ್‍ಗೆ ತಿಳಿಸಿದರು.
ಪ್ರಶ್ನೋತ್ತರ ಕಲಾಪದಲ್ಲಿ ತಾರಾ ಅನುರಾಧಾ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ವರ್ಗಾವಣೆ ಪ್ರಕ್ರಿಯೆಯನ್ನು ಕೌನ್ಸಿಲಿಂಗ್ ಮೂಲಕ ನಡೆಸಲು ಜನವರಿ 2018ರಲ್ಲಿ ವೇಳಾಪಟ್ಟಿ ಪ್ರಕಟಿಸಲಾಗಿತ್ತು. ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ-ಸಂಹಿತೆ ಜಾರಿಯಾದ ಕಾರಣ ವರ್ಗಾವಣೆ ಪ್ರಕ್ರಿಯೆ ಮುಂದೂಡಲಾಗಿತ್ತು.
ಈ ಮಧ್ಯೆ ವರ್ಗಾವಣೆ ಅಧಿಸೂಚನೆಗೆ ಕೋರಿ ಹತ್ತು ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ ಮೂರು ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಉಳಿದ ಏಳು ಪ್ರಕರಣಗಳ ವಿಚಾರಣೆ ಇಂದು ನಡೆಯಲಿದ್ದು, ಆ ವಿಚಾರಣೆ ಮುಗಿದ ನಂತರ ತ್ವರಿತ ಅಗತ್ಯ ಕಾನೂನು ಹೋರಾಟ ನಡೆಸಿ ಮುಂದಿನ 15 ದಿನಗಳೊಳಗೆ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಹೈಕೋರ್ಟ್‍ನಲ್ಲಿ ತಡೆಯಾಜ್ಞೆ ಜಾರಿಯಲ್ಲಿದ್ದುದರಿಂದ ವರ್ಗಾವಣೆಗೆ ವಿಳಂಬವಾಗಿತ್ತು. ವರ್ಗಾವಣೆ ಪದವಿ ಪೂರ್ವ ಉಪನ್ಯಾಸಕರ ಕೌನ್ಸೆಲಿಂಗ್‍ಗೆ ಸಂಬಂಧಿಸಿದಂತೆ ಎ, ಬಿ, ಸಿ ವಲಯಗಳ ಗುರುತಿಸುವಿಕೆಗೆ ತಿದ್ದುಪಡಿ ಮಾಡಲು ಕ್ರಮ ವಹಿಸುತ್ತಿರುವುದರಿಂದ ಪ್ರಕ್ರಿಯೆ ವಿಳಂಬವಾಗಿದೆ ಎಂದು ಅವರು ಹೇಳಿದರು.