ನಾಲ್ಕುವರೆ ಸಾವಿರ ಉಪನ್ಯಾಸಕ ನೇಮಕಕ್ಕೆ ಕ್ರಮ

 

ಬೆಂಗಳೂರು, ಜು.12-ಖಾಲಿಯಿರುವ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳ ನೇಮಕಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ವಿಧಾನಪರಿಷತ್‍ನಲ್ಲಿ ಹೇಳಿದರು.
ಪ್ರಶ್ನೋತ್ತರ ಕಲಾಪದಲ್ಲಿ ಕೆ.ಪ್ರತಾಪ್‍ಚಂದ್ರಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು,ಈ ಸಂಬಂಧ ಸಮಿತಿ ರಚನೆಯಾಗಿದ್ದು, ಸಮಿತಿಯೊಂದಿಗೆ ಉಪಕುಲಪತಿ ನೇಮಕಾತಿ ಬಗ್ಗೆ ಮಾತುಕತೆ ನಡೆಸಲಾಗಿದೆ ಎಂದು ಹೇಳಿದರು.
ಯುಜಿಸಿ ನಿಯಮಾನುಸಾರ ಹಾಗೂ ವೃಂದ ಮತ್ತು ನೇಮಕಾತಿ ನಿಯಮಾನುಸಾರ ಪ್ರಾಂಶುಪಾಲರ ಹುದ್ದೆಗಳನ್ನು ನೇರ ನೇಮಕಾತಿ ಮುಖಾಂತರ ಭರ್ತಿ ಮಾಡಬೇಕಾಗಿರುತ್ತದೆ. ಅದರಂತೆ ನಿಯಮಗಳನ್ನು ರಚಿಸಿದ್ದು, ಪರಿಶೋಧನೆಗಾಗಿ ಸಂಸದೀಯ ವ್ಯವಹಾರ ಮತ್ತು ಶಾಸನ ರಚನಾ ಇಲಾಖೆಗೆ ಕಳುಹಿಸಲಾಗಿದೆ.
ಖಾಯಂ ಪ್ರಾಂಶುಪಾಲರನ್ನು ನೇಮಕ ಮಾಡುವವರೆಗೆ ಪ್ರಸ್ತುತ ಸೇವೆಯಲ್ಲಿ ಹಿರಿಯರಾದಂತಹ ಪ್ರಾಧ್ಯಾಪಕರನ್ನು ಪ್ರಭಾರ ಪ್ರಾಂಶುಪಾಲರನ್ನಾಗಿ ನೇಮಕ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 13,616 ಮಂಜೂರಾದ ಹುದ್ದೆಗಳಿದ್ದು, 4,583 ಖಾಲಿ ಹುದ್ದೆಗಳಿವೆ. ಇವುಗಳನ್ನು ಭರ್ತಿ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಖಾಲಿ ಇರುವ ಬೋಧಕ ಹುದ್ದೆಗಳಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಂಡು ಪಾಠ-ಪ್ರವಚನಗಳನ್ನು ಮಾಡಲಾಗುತ್ತದೆ ಎಂದು ಹೇಳಿದರು.
ಗ್ರಂಥಪಾಲಕರು ಹಾಗೂ ದೈಹಿಕ ಶಿಕ್ಷಣ ಬೋಧಕರ ಹುದ್ದೆಗಳನ್ನು ಸಿಇಟಿ ಮಾದರಿಯಲ್ಲಿ ಯಾವುದೇ ಸಂದರ್ಶನವಿಲ್ಲದೆ ಆಯ್ಕೆ ನಡೆಸುವ ಕುರಿತು ನಿಯಮಾವಳಿ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ