ಕೃಷ್ಣಕೊಳ್ಳಕ್ಕೆ ಖರ್ಚು ಮಾಡಿದ ಹಣವೇಷ್ಟು ?

 

ಬೆಂಗಳೂರು, ಜು.12-ಕೃಷ್ಣಾಕೊಳ್ಳದ ಯೋಜನೆಗಳಿಗೆ ಹಿಂದಿನ ಕಾಂಗ್ರೆಸ್ ಹಾಗೂ ಬಿಜೆಪಿ ಸರ್ಕಾರದಲ್ಲಿ ಖರ್ಚು ಮಾಡಿದ ಹಣದ ವಿಚಾರ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದಕ್ಕೆ ಎಡೆಮಾಡಿಕೊಟ್ಟಿತು.
ಪ್ರಸಕ್ತ ಸಾಲಿನ ಆಯವ್ಯಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಮಗಾರಿಗಳನ್ನು ಪೂರ್ಣಗೊಳಿಸಲು ವಾರ್ಷಿಕ 10ಸಾವಿರದಂತೆ ಐದು ವರ್ಷದಲ್ಲಿ 50ಸಾವಿರ ಕೋಟಿ ರೂ. ಖರ್ಚು ಮಾಡುವುದಾಗಿ ಹೇಳಲಾಗಿತ್ತು. ಆದರೆ, ಆ ಪ್ರಮಾಣದ ಹಣವನ್ನು ಖರ್ಚು ಮಾಡಲಿಲ್ಲ ಎಂದು ಆಕ್ಷೇಪಿಸಿದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೊಸಪೇಟೆಯಿಂದ ಕೂಡಲಸಂಗಮದವರೆಗೆ ಕಾಂಗ್ರೆಸ್ ನಡಿಗೆ ಕೃಷ್ಣಾದ ಕಡೆಗೆ ಎಂಬ ಹೆಸರಿನಲ್ಲಿ ಪಾದಯಾತ್ರೆ ಮಾಡಲಾಗಿತ್ತು. ಕೂಡಲ ಸಂಗಮದಲ್ಲಿ ನಡೆದ ಸಮಾವೇಶದಲ್ಲಿ ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು 50ಸಾವಿರ ಕೋಟಿ ರೂ. ಬೇಕಾಗುತ್ತದೆ ಎಂದು ಹೇಳಲಾಗಿತ್ತು. ಅದರಂತೆ ಪ್ರತಿ ವರ್ಷ 10ಸಾವಿರ ಕೋಟಿ ರೂ. ಕೃಷ್ಣಾ ಹಾಗೂ ಕಾವೇರಿ ಕೊಳ್ಳದ ಯೋಜನೆಗೆ ಖರ್ಚು ಮಾಡುವ ಭರವಸೆಯನ್ನು ಚುನಾವಣಾ ಪೂರ್ವದಲ್ಲಿ ನೀಡಿದ್ದೆವು. ಅದರಂತೆ ಸರ್ಕಾರ ರಚನೆಯಾದ ಮೇಲೆ ಐದು ವರ್ಷದಲ್ಲಿ 58ಸಾವಿರ ಕೋಟಿ ರೂ. ಮಂಜೂರು ಮಾಡಿ 47 ಸಾವಿರ ಕೋಟಿ ರೂ. ಖರ್ಚು ಮಾಡಿದ್ದೇವೆ. ಆದರೆ ನಿಮ್ಮ(ಬಿಜೆಪಿ) ಸರ್ಕಾರದಲ್ಲಿ ಕೇವಲ 18ಸಾವಿರ ಕೋಟಿ ರೂ. ಖರ್ಚು ಮಾಡಿದ್ದೀರಿ ಎಂದು ಛೇಡಿಸಿದರು.
ಆಗ ಬಿಜೆಪಿ ಶಾಸಕ ಬಸವರಾಜಬೊಮ್ಮಾಯಿ ಮಾತನಾಡಿ, ಬಜೆಟ್‍ನ ಇತಿಮಿತಿಯಲ್ಲಿ ನಮ್ಮ ಸರ್ಕಾರದಲ್ಲಿ ನೀರಾವರಿಗೆ ಹಣ ಖರ್ಚು ಮಾಡಿದ್ದೇವೆ. ಆ ಸಂದರ್ಭದಲ್ಲಿ ಕೃಷ್ಣಾ ನ್ಯಾಯಾಧೀಕರಣದ ತೀರ್ಪು ಬಂದಿರಲಿಲ್ಲ. ಆದರೆ, 2013ರಲ್ಲಿ ನಡೆದ ವಿಧಾನಸಭೆ ಚುನಾವಣೆ ಪೂರ್ವದ ಪ್ರಣಾಳಿಕೆಯಲ್ಲಿ ಕೃಷ್ಣಾ ಕೊಳ್ಳದ ಯೋಜನೆಗಳನ್ನು ಪೂರ್ಣಗೊಳಿಸಲು 50ಸಾವಿರ ಕೋಟಿ ರೂ. ಖರ್ಚು ಮಾಡುವುದಾಗಿ ಭರವಸೆ ನೀಡಿದ್ದಿರಿ. ನಾಳೆ ಪ್ರಣಾಳಿಕೆ ತಂದು ಓದುತ್ತೇನೆ. ಅದರಲ್ಲಿ ಈ ವಿಚಾರ ಇಲ್ಲದಿದ್ದರೆ ನಮ್ಮ ಹೇಳಿಕೆಯನ್ನು ವಾಪಸ್ ಪಡೆಯುತ್ತೇವೆ. ಒಂದು ವೇಳೆ ಇದ್ದಿದ್ದೇ ಆದರೆ, ಐದು ವರ್ಷದಲ್ಲಿ ನೀವು ನೀಡಿರುವ ಹೇಳಿಕೆಗಳನ್ನು ವಾಪಸ್ ಪಡೆಯಬೇಕು ಎಂದರು.
ಕಾಂಗ್ರೆಸ್ ಶಾಸಕ ಎಂ.ಬಿ.ಪಾಟೀಲ್ ಮಾತನಾಡಿ, ಪಾದಯಾತ್ರೆ ಸಂದರ್ಭದಲ್ಲಿ ನೀರಾವರಿ ಯೋಜನೆಗಳಿಗೆ ವಾರ್ಷಿಕ 10ಸಾವಿರ ಕೋಟಿ ರೂ. ಖರ್ಚು ಮಾಡುವುದಾಗಿ ಹೇಳಿದ್ದೆವು. ಕೃಷ್ಣ ಮೇಲ್ದಂಡೆ ಯೋಜನೆಗೆ 10ಸಾವಿರ ಕೋಟಿ ರೂ. ಖರ್ಚು ಮಾಡುವುದಾಗಿ ಹೇಳಿಲ್ಲ ಎಂದರು.
ಅಷ್ಟರಲ್ಲಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದ್ದ ಅಂಶಗಳನ್ನು ವಾಚಿಸಿದರು. ಆಗ ಮಾತು ಮುಂದುವರೆಸಿದ ಎಂ.ಬಿ.ಪಾಟೀಲ್, ನಮ್ಮ ಪಕ್ಷದ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಎರಡು ಪ್ರಣಾಳಿಕೆಗಳಿವೆ. ಒಂದರಲ್ಲಿ ಟೈಪಿಂಗ್ ದೋಷವಾಗಿದೆ ಎಂದಾಗ, ಬಸವರಾಜ್ ಬೊಮ್ಮಾಯಿ ಮಾತನಾಡಿ, ನೀವು ಎರಡು ರೀತಿಯ ಪ್ರಣಾಳಿಕೆ ಬರೆದಿದ್ದೀರಾ ? ಜನರಿಗೆ ಒಂದು ತೋರಿಸೋದು ಮತ್ತೊಂದು ಅನುಷ್ಠಾನ ಮಾಡೋದೇ. ಕನ್ನಡ ಶಾಲೆ ಮಕ್ಕಳಿಗೆ ಕೊಟ್ಟರೆ ಹೇಳುತ್ತಾರೆ ಎಂದು ತೀಕ್ಷ್ಣವಾಗಿ ತಿರುಗೇಟು ನೀಡಿದರು.
ಮಧ್ಯ ಪ್ರವೇಶಿಸಿದ ಸ್ಪೀಕರ್, ಇಡೀ ನೀರಾವರಿ ಯೋಜನೆಗೆ 50ಸಾವಿರ ಕೋಟಿ ರೂ ಎಂದು ಹೇಳಲಾಗಿತ್ತು ಎಂಬುದನ್ನು ಈಗಾಗಲೇ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ ಎಂದು ಚರ್ಚೆಗೆ ತೆರೆ ಎಳೆಯುವ ಪ್ರಯತ್ನ ಮಾಡಿದರು.
ಆದರೂ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ವಾದ- ಪ್ರತಿವಾದ ಮುಂದುವರೆದಿತ್ತು. ಮತ್ತೆ ಸಿದ್ದರಾಮಯ್ಯನವರು ಮಾತನಾಡಿ, ಕೃಷ್ಣಾಕೊಳ್ಳದ ಯೋಜನೆಗಳನ್ನು ಪೂರ್ಣಗೊಳಿಸಲು ಆ ಸಂದರ್ಭದಲ್ಲಿ ಎಷ್ಟು ಹಣ ಬೇಕಿತ್ತು ನೀವೇ ಹೇಳಿ ಎಂದು ಬಿಜೆಪಿ ಶಾಸಕರನ್ನು ಪ್ರಶ್ನಿಸಿದರು.
ಅಲ್ಲಿಗೆ ಸಭಾಧ್ಯಕ್ಷರ ಮಧ್ಯಪ್ರವೇಶಸದಿಂದ ಈ ವಿಚಾರಕ್ಕೆ ತೆರೆ ಬಿದ್ದಿತು.
ಬಸವನಗೌಡ ಪಾಟೀಲ್‍ಯತ್ನಾಳ್ ಮಾತನಾಡಿ, ಕೃಷ್ಣಾಕೊಳ್ಳದ ನೀರಾವರಿ ಯೋಜನೆಯನ್ನು ನಿರ್ಲಕ್ಷಿಸಲಾಗಿದೆ. ಆಲಮಟ್ಟಿ ಜಲಾಶಯದ ಅಣೆಕಟ್ಟೆ ಎತ್ತರ ಮಾಡಿಲ್ಲ. ಮುಳುಗಡೆ ಪ್ರದೇಶದ ಪುನರ್ವಸತಿ, ಭೂ ಸ್ವಾಧೀನ ಕಾರ್ಯ ಪೂರ್ಣಗೊಂಡಿಲ್ಲ ಎಂದು ಆರೋಪಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ