ಜ್ಯೇಷ್ಠತೆಯನ್ನು ವಿಸ್ತರಿಸುವ 2017ರ ಕಾಯ್ದೆಯನ್ನು ಅನುಷ್ಠಾನಗೊಳಿಸುವಂತೆ ಒತ್ತಾಯ

 

ಬೆಂಗಳೂರು, ಜು.11-ಕರ್ನಾಟಕ (ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ) ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಪರಿಶಿಷ್ಟ ಜಾತಿ/ಪಂಗಡದ ಸರ್ಕಾರಿ ನೌಕರರಿಗೆ ತ್ವರಿತ ಪರಿಣಾಮದ ಜ್ಯೇಷ್ಠತೆಯನ್ನು ವಿಸ್ತರಿಸುವ 2017ರ ಕಾಯ್ದೆಯನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ನೌಕರರು ಪುರಭವನದ ಮುಂಭಾಗ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ಎಸ್‍ಸಿ/ಎಸ್‍ಟಿ ನೌಕರರ ಸಮನ್ವಯ ಸಮಿತಿ, ನೌಕರರ ಒಕ್ಕೂಟ ಹಾಗೂ ಎಲ್ಲ ಇಲಾಖೆಯ ಎಸ್‍ಸಿ/ಎಸ್‍ಟಿ ನೌಕರರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ನೌಕರರು, ಬಿ.ಕೆ.ಪವಿತ್ರಾ ಅವರ ಪ್ರಕರಣದಲ್ಲಿ ನ್ಯಾಯಾಲಯವು ಕೋರಿದ ಮಾಹಿತಿಯನ್ನು ರಾಜ್ಯ ಸರ್ಕಾರ ನೀಡದ ಕಾರಣ ತೊಂದರೆಗೆ ಸಿಲುಕಿದ ಎಸ್‍ಸಿ/ಎಸ್‍ಟಿ ಪಂಗಡದ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರ ಹಿತ ಕಾಯಲು ಬಡ್ತಿ ಹಾಗೂ ಜ್ಯೇಷ್ಠತೆ ಸಂರಕ್ಷಿಸುವ ಉದ್ದೇಶದಿಂದ 2017ರಲ್ಲಿ ಕಾಯ್ದೆ ರೂಪಿಸಿದ್ದು, ಸದರಿ ಕಾಯ್ದೆಗೆ ರಾಷ್ಟ್ರಪತಿಗಳು 2018ರ ಜೂನ್ 14 ರಂದು ಅಂಕಿತ ಹಾಕಿದ್ದು, ರಾಜ್ಯ ಸರ್ಕಾರ 2018ರ ಜೂನ್ 23ರಂದು ರಾಜ್ಯ ಪತ್ರದಲ್ಲಿ ಪ್ರಕಟಿಸಿದೆ.
ಆದರೆ, ಪ್ರಸ್ತುತ ಸಮ್ಮಿಶ್ರ ಸರ್ಕಾರವು ಕಾಯ್ದೆಯನ್ನು ಅನುಷ್ಠಾನಗೊಳಿಸದೆ ದಲಿತ ವರ್ಗದ ಅಧಿಕಾರಿ ಹಾಗೂ ನೌಕರರ ಮೇಲೆ ದಮನಕಾರಿ ಹಾಗೂ ವಿಳಂಬ ನೀತಿಯನ್ನು ಅನುಸರಿಸುತ್ತಿದೆ ಎಂದು ದೂರಿದರು.
ಕೂಡಲೇ ಮುಂಬಡ್ತಿ ಮತ್ತು ಹಿಂಬಡ್ತಿಗಳನ್ನು ರದ್ದುಪಡಿಸಬೇಕು. ಹಿಂಬಡ್ತಿ ಹೊಂದುವ ಪೂರ್ವದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹುದ್ದೆ ಮತ್ತು ಸ್ಥಳದಲ್ಲೇ ನೌಕರರನ್ನು ನಿಯುಕ್ತಿಗೊಳಿಸಬೇಕು. ನ್ಯಾಯಾಲಯದ ತೀರ್ಪು ಹಾಗೂ ಸರ್ಕಾರದ ಆದೇಶ ಉಲ್ಲಂಘಿಸಿ ಜ್ಯೇಷ್ಠತೆ ಪರಿಷ್ಕರಿಸಿ ಹಿಂಬಡ್ತಿ ನೀಡಲು ಕಾರಣರಾಗಿರುವ ಅಧಿಕಾರಿಗಳು ಹಾಗೂ ನೌಕರರ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ