ಬೆಂಗಳೂರು, ಜು.11- ಹಂಗೆ ಬಂದು ಹಿಂಗೆ ಹೋಗೋಕೆ ಇದೇನು ಬೀಗರ ಮನೆ ಅಂದುಕೊಂಡೀರಾ…? ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಚಿವರು ಮತ್ತು ಶಾಸಕರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಜಿ.ಟಿ.ದೇವೇಗೌಡ ಸೇರಿದಂತೆ ಮತ್ತಿತರ ಸಚಿವರು ಈ ಸಂದರ್ಭದಲ್ಲಿ ಸದನಕ್ಕೆ ಬಂದಿರಲಿಲ್ಲ. ಸಭಾಪತಿಯವರು ಯಾವ ಸಚಿವರು ಮತ್ತು ಸದಸ್ಯರು ಹಾಜರಿರಬೇಕಿತ್ತು ಎಂಬುದನ್ನು ಓದಿ ಹೇಳುತ್ತಿದ್ದರು. ಈ ವೇಳೆ ಕೃಷಿ ಸಚಿವ ಶಿವಶಂಕರರೆಡ್ಡಿ ಅವರು ಡಿ.ಸಿ.ತಮ್ಮಣ್ಣ, ಜಿ.ಟಿ.ದೇವೇಗೌಡ ಬಾರದಿದ್ದರೇನಂತೆ, ನಾವು ಇದ್ದೇವಲ್ಲ ಎಂದು ಹೇಳಿದರು.
ಇದರಿಂದ ಇನ್ನಷ್ಟು ಕುಪಿತರಾದ ಸಭಾಪತಿ ಹಿಂಗೆ ಬಂದು ಹಂಗೆ ಹೋಗೋಕೆ ಇದು ಮಾವನ ಮನೆಯಲ್ಲ. ಕಡ್ಡಾಯವಾಗಿ ಸದನದಲ್ಲಿ ಇರಬೇಕೆಂದು ತಾಕೀತು ಮಾಡಿದರು.
ಅಧಿವೇಶನ ನಡೆಯುವ ಸಂದರ್ಭದಲ್ಲಿ ಸಚಿವರು, ಶಾಸಕರು, ಅಧಿಕಾರಿಗಳು, ವಿಧಾನಸಭೆ ಇಲ್ಲವೆ ವಿಧಾನ ಪರಿಷತ್‍ನಲ್ಲಿ ಹಾಜರಿರಬೇಕು. ಅಲ್ಲಿಯೂ ಇಲ್ಲ ಇಲ್ಲಿಯೂ ಇಲ್ಲ ಎಂದರೆ ಸದನ ನಡೆಸುವುದಾದರೂ ಹೇಗೆ? ನಾನು ಮೊದಲ ದಿನದಿಂದಲೂ ಇದೇ ಮಾತು ಹೇಳುತ್ತಿದ್ದೇನೆ. ಈ ಬಗ್ಗೆ ಸಭಾನಾಯಕರು ಗಮನ ಹರಿಸಬೇಕೆಂದು ಸೂಚಿಸಿದರು.