ಗುತ್ತಿಗೆದಾರರ ಮಾಫಿಯಾಕ್ಕೆ ಕಡಿವಾಣ ಹಾಕಿ – ಶಾಸಕ ಎ.ಟಿ.ರಾಮಸ್ವಾಮಿ

 

ಬೆಂಗಳೂರು, ಜು.11- ಗುತ್ತಿಗೆದಾರರ ಮಾಫಿಯಾ ಹೆಚ್ಚಾಗಿದ್ದು , ಸರ್ಕಾರ ಕಡಿವಾಣ ಹಾಕಬೇಕಿದೆ ಎಂದು ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ
ವಿಧಾನಸಭೆಯಲ್ಲಿಂದು ತಿಳಿಸಿದರು.
ಪ್ರಸಕ್ತ ಸಾಲಿನ ಆಯವ್ಯಯ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಟ್ಟಡ ಸೇರಿದಂತೆ ಸರ್ಕಾರಿ ಕಾಮಗಾರಿಗಳಲ್ಲಿ ಗುಣಮಟ್ಟ ಇರುವುದಿಲ್ಲ. ವಸತಿ ನಿಯಮದಡಿ ನಿರ್ಮಿಸಿರುವ ಕಟ್ಟಡಗಳು ಬೀಳುತ್ತಿವೆ. ಗುತ್ತಿಗೆದಾರರ ಮಾಫಿಯಾ ಹೆಚ್ಚಾಗಿದ್ದು , ಇದಕ್ಕೆ ಕಡಿವಾಣ ಹಾಕುವುದು ಅಗತ್ಯ ಎಂದು ಅವರು ಹೇಳಿದರು.
ನಿಯಮ ಬಾಹಿರವಾಗಿ ಹಿಂದುಳಿದ ವರ್ಗಗಳ ಇಲಾಖೆ ನಿರ್ದೇಶಕರೊಬ್ಬರು 10.50 ಕೋಟಿ ರೂ. ಮ್ಯೂಚುಯಲ್ ಫಂಡ್‍ನಲ್ಲಿ ತೊಡಗಿಸಿದ್ದಾರೆ. ಈ ಅಧಿಕಾರಿ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ವಾಸ್ತವವಾಗಿ 18 ಸಾವಿರ ಗುತ್ತಿಗೆ ಕಾರ್ಮಿಕರಿದ್ದರೂ 44,000 ಗುತ್ತಿಗೆ ಕಾರ್ಮಿಕರಿದ್ದಾರೆ ಎಂದು ನಕಲಿ ಬಿಲ್ ಸೃಷ್ಟಿಸಿ ಹಣವನ್ನು ನುಂಗಿ ನೀರು ಕುಡಿದಿದ್ದಾರೆ. ಹಿರಿಯ ಅಧಿಕಾರಿಗಳ ದುರಾಸೆಗೆ ಕಡಿವಾಣ ಹಾಕಬೇಕಿದೆ ಎಂದರು.
ಅಬಕಾರಿ ತೆರಿಗೆ ಏರಿಕೆಗೆ ತಕರಾರಿಲ್ಲ. ಆದರೆ ಮನೆಯ ಯಜಮಾನ ಕುಡಿತಕ್ಕೊಳಗಾದರೆ ಸರ್ಕಾರ ಯಾವ ಭಾಗ್ಯ ಕೊಟ್ಟರೂ ಪ್ರಯೋಜನವಾಗುವುದಿಲ್ಲ. ಸರ್ಕಾರ ಅಬಕಾರಿ ಬದಲಾಗಿ ಬೇರೆ ಆದಾಯ ಮೂಲಗಳನ್ನು ಹುಡುಕುವುದು ಸೂಕ್ತ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ