ರಾಜ್ಯದಲ್ಲಿ ವರುಣಾರ್ಭಟ, ಪ್ರವಾಹ ಭೀತಿ

 

ಬೆಂಗಳೂರು,ಜು.10- ರಾಜ್ಯದ ವಿವಿಧೆಡೆಗಳಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಕೆಲವು ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಮಹಾರಾಷ್ಟ್ರದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಬಾಗಲಕೋಟೆ ಜಿಲ್ಲೆ ಜಮಖಂಡಿ ಬಳಿ ಇರುವ ಹಿಪ್ಪರಗಿ ಬ್ಯಾರೇಜ್‍ನ ನೀರಿನ ಮಟ್ಟ ಗಣನೀಯವಾಗಿ ಹೆಚ್ಚಳವಾಗುತ್ತಲೇ ಇದೆ.
ಕೃಷ್ಣಾ ತೀರದಲ್ಲಿರುವ ಗ್ರಾಮಗಳಿಗೆ ಪ್ರವಾಹ ಭೀತಿ ಉಂಟಾಗಿದೆ. ರಸ್ತೆ ಸಂಚಾರಗಳಲ್ಲಿ ವ್ಯತ್ಯಯವಾಗಿದೆ. ನದಿ ತಟದಲ್ಲಿ ಹಳ್ಳ-ಕೊಳ್ಳಗಳಲ್ಲಿ ತುಂಬಿ ಹರಿಯುತ್ತಿರುವುದರಿಂದ ರಸ್ತೆಗಳಲ್ಲಿ ಜಲಪ್ರಳಯವಾಗಿ ಹರಿಯುತ್ತಿದೆ. ಸಂಚಾರಕ್ಕೂ ಅಡಚಣೆ ಆಗಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿ ತಟದ 10 ಗ್ರಾಮಗಳಿಗೆ ಬೋಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ.
ಕೊಡಗು: ಅದೇ ರೀತಿ ಕೊಡಗಿನಲ್ಲಿಯೂ ಭಾರೀ ಮಳೆ ಸುರಿಯುತ್ತಿದ್ದು, ಹಳ್ಳ -ಕೊಳ್ಳಗಳು, ನದಿಗಳು, ತೊರೆಗಳೆಲ್ಲಾ ತುಂಬಿ ಹರಿಯುತಿತವೆ. ಬಡವರ ಊಟಿ ಎಂದೇ ಖ್ಯಾತಿ ಪಡೆದಿರುವ ಕೊಡಗಿನಲ್ಲಿ ಭಾರೀ ಮಳೆ, ಗಾಳಿ, ಚಳಿಗೆ ಜನ ಹೈರಾಣರಾಗಿದ್ದಾರೆ. ವಿದ್ಯುತ್ ಸರಬರಾಜಿನಲ್ಲೂ ವ್ಯತ್ಯಯ ಉಂಟಾಗಿದ್ದು, ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ.
ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಮಳೆಯ ಅಬ್ಬರ ಜೋರಾಗಿಯೇ ಇದೆ. ಹಲವು ದಿನಗಳಿಂದ ಸತತವಾಗಿ ಮುಂದುವರಿದಿರುವ ವರುಣನ ರಗಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಇದರಿಂದ 300ಕ್ಕೂ ಹೆಚ್ಚು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.
ಮಹಾನಗರ ಮುಖ್ಯ ರಸ್ತೆಗಳ ಮೇಲೂ ನೀರು ನುಗ್ಗಿರುವುದರಿಂದ ಕೆಲವು ಪ್ರದೇಶಗಳ ರಸ್ತೆ ಸಂಚಾರ ಬಂದ್ ಮಾಡಲಾಗಿದೆ. ರೈಲು ಸಂಚಾರದಲ್ಲೂ ವ್ಯತ್ಯಯವಾಗಿದ್ದು , ಜನ ಹೈರಾಣರಾಗಿದ್ದಾರೆ.
ಇದಲ್ಲದೆ ಹಾಸನ, ಚಿಕ್ಕಮಗಳೂರು, ಮಂಗಳೂರು, ಮೈಸೂರು ಹಾಗೂ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲೂ ವರುಣ ಆರ್ಭಟ ಜೋರಾಗಿಯೇ ಇದೆ. ರೈತರ ಜಮೀನಿಗೆ ನೀರು ನುಗ್ಗಿ ಕಷ್ಟಪಟ್ಟು ಬೆಳೆದಿದ್ದ ಬೆಳೆ ನೀರು ಪಾಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ