ಸಹಕಾರ ಸಂಘದ ಸಂಪೂರ್ಣ ಸಾಲ ಮನ್ನಾಕ್ಕೆ ಒತ್ತಾಯ

 

ಬೆಂಗಳೂರು, ಜು.10- ಸಹಕಾರ ಸಂಘದಲ್ಲಿ ರೈತರು ಪಡೆದಿರುವ ಸಂಪೂರ್ಣ ಸಾಲಮನ್ನಾ ಮಾಡಬೇಕು. ಹಾಗೆಯೇ ಸ್ತ್ರೀ ಶಕ್ತಿ ಸಂಘಗಳ ಸಾಲವನ್ನು ಮನ್ನಾ ಮಾಡಬೇಕೆಂದು ಕಾಂಗ್ರೆಸ್ ಶಾಸಕರು ಒತ್ತಾಯಿಸಿದ ಘಟನೆ ನಡೆಯಿತು.
ಜು.5ರಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಿದ ಬಜೆಟ್ ಮೇಲೆ ಇಂದು ಚರ್ಚೆ ಆರಂಭಿಸಿದ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಅವರು, ಸಣ್ಣಪುಟ್ಟ ರೈತರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಕೊಡುವುದಿಲ್ಲ. ಒಂದು ವೇಳೆ ಸಾಲ ಕೊಟ್ಟರೂ ಬ್ಯಾಂಕ್‍ಗಳು ಕೇಳುವ ಖಾತ್ರಿಗಳನ್ನು ರೈತರಿಗೆ ಕೊಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಸಹಕಾರ ಸಂಘಗಳಲ್ಲಿ ರೈತರು ಹೆಚ್ಚಾಗಿ ಸಾಲ ಪಡೆದಿರುತ್ತಾರೆ. ಅವರಿಗೆ 2 ಲಕ್ಷ ರೂ.ವರೆಗೆ ಮಾತ್ರ ಸೀಮಿತಗೊಳಿಸದೆ ಸಂಪೂರ್ಣ ಸಾಲಮನ್ನಾ ಮಾಡಬೇಕೆಂದು ಆಗ್ರಹಿಸಿದರು.
ಅದೇ ರೀತಿ ಮಹಿಳೆಯರೇ ರಚಿಸಿಕೊಂಡಿರುವ ಸ್ತ್ರೀ ಶಕ್ತಿ ಸಂಘಗಳು, ಸಹಕಾರ ಸಂಘಗಳ ಮೂಲಕ ಪಡೆದಿರುವ ಸಾಲವನ್ನು ಮನ್ನಾ ಮಾಡಬೇಕೆಂದು ಕೋರಿದರು.
ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್ ಶಾಸಕಿ ರೂಪಾ ಶಶಿಧರ್, ಸ್ತ್ರೀ ಶಕ್ತಿ ಸಂಘಗಳಿಗೆ ತಲಾ 30 ಸಾವಿರ ರೂ. ಸಾಲ ನೀಡಲಾಗುತ್ತಿದೆ. ರಾಜ್ಯಾದ್ಯಂತ ಸುಮಾರು 11 ಲಕ್ಷ ಮಹಿಳೆಯರು ಸಾಲ ಪಡೆದಿದ್ದು, ಅದು ಸುಮಾರು ಒಂದು ಕೋಟಿಯಾಗಬಹುದು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಹಿಳೆಯರ ಪರವಾಗಿ ನಿರ್ಧಾರ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು.
ಮತ್ತೆ ಮಾತು ಮುಂದುವರಿಸಿದ ಸುಧಾಕರ್ ಅವರು, ರಾಜ್ಯದ 2.18 ಲಕ್ಷ ಕೋಟಿ ಬಜೆಟ್‍ನಲ್ಲಿ ಒಂದು ಸಾವಿರ ಕೋಟಿ ದೊಡ್ಡದಲ್ಲ. ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಮಾಡಿದರೆ ಗ್ರಾಮೀಣ ಭಾಗದ ಆರ್ಥಿಕ ಚಟುವಟಿಕೆಗಳಿಗೆ ಆದ್ಯತೆ ನೀಡಿದಂತಾಗುತ್ತದೆ ಎಂದು ಹೇಳಿದರು.
ಅನ್ನಭಾಗ್ಯ ಯೋಜನೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಹಿಂದಿನ ಸಿದ್ದರಾಮಯ್ಯನವರ ಸರ್ಕಾರ ಪ್ರತಿ ವ್ಯಕ್ತಿಗೆ ತಲಾ 7 ಕೆಜಿ ಅಕ್ಕಿ ನೀಡುತ್ತಿತ್ತು. ಇದನ್ನು ಎಚ್.ಡಿ.ಕುಮಾರಸ್ವಾಮಿ ಅವರು 5ಕ್ಕೆ ಇಳಿಸಿದ್ದಾರೆ. 2 ಕೆಜಿ ಕಡಿತ ಮಾಡುವುದರಿಂದ ರೈತರ ಸಾಲಮನ್ನಾಕ್ಕೆ ಹೆಚ್ಚಿನ ಸಂಪನ್ಮೂಲ ಒದಗಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಹಿಂದಿನಂತೆ 7 ಕೆಜಿಯನ್ನೇ ಮುಂದುವರಿಸಿ. ಸಾಧ್ಯವಾದರೆ ನೀವು ಇನ್ನೂ ಒಂದೆರಡು ಕೆಜಿ ಅಕ್ಕಿ ಕೊಡಿ. ಇದು ಬಡವರ ಯೋಜನೆ. ಸುಮಾರು 500 ಕೋಟಿ ಖರ್ಚಾದರೂ ಚಿಂತೆ ಬೇಡ ಎಂದು ಮನವಿ ಮಾಡಿದರು.
ಮಂಗಳೂರು ಹಾಗೂ ಕರಾವಳಿ ಭಾಗದಲ್ಲಿ ವಿಪರೀತ ಮಳೆಯಾಗಿ ಅತಿವೃಷ್ಟಿಯಾಗಿದೆ. ಅಲ್ಲಿ ಹೋಮ, ಪೂಜೆ ಮಾಡಿಸುವ ಚರ್ಚೆ ನಡೆಯುತ್ತಿವೆ. ಆದರೆ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಮುಂಗಾರಿನಲ್ಲೂ ನೀರಿನ ಕೊರತೆ ಕಾಡುತ್ತಿದೆ. ಸರಿಯಾಗಿ ಮಳೆ ಬರುತ್ತಿಲ್ಲ. ಬೆಂಗಳೂರಿನ ಕೆಸಿ ವ್ಯಾಲಿ ಹಾಗೂ ಎಚ್‍ಎನ್ ವ್ಯಾಲಿಯಿಂದ ಸಂಸ್ಕರಿಸಿದ ನೀರನ್ನು ಈ ಎರಡೂ ಜಿಲ್ಲೆಗಳಿಗೆ ಹರಿಸಲಾಗುತ್ತಿದೆ. ಆದರೆ, ಸಂಸ್ಕರಣೆ ಹಂತದಲ್ಲಿ ಲೋಪವಿದೆ ಎಂದು ವಿಜ್ಞಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೂರನೆ ಹಂತದ ಸಂಸ್ಕರಣೆಗೆ ಹೆಚ್ಚು ಅನುದಾನ ನೀಡಬೇಕು ಎಂದು ಸುಧಾಕರ್ ಮನವಿ ಮಾಡಿದರು.
ಎತ್ತಿನಹೊಳೆ ಯೋಜನೆ ಪ್ರಗತಿ ಬಗ್ಗೆ ಬಯಲು ಸೀಮೆ ಜಿಲ್ಲೆಯ ಜನಪ್ರತಿನಿಧಿಗಳಿಗೆ ಅಸಮಾಧಾನವಿದೆ. ನಿರೀಕ್ಷೆಗೆ ತಕ್ಕಂತೆ ಕಾಮಗಾರಿ ನಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದ ಆರ್ಥಿಕ ಸುಸ್ಥಿರತೆಗಾಗಿ ಮುಖ್ಯಮಂತ್ರಿಗಳು ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ. 34 ಸಾವಿರ ಕೋಟಿ ರೈತರ ಸಾಲಮನ್ನಾದಿಂದ ಆರ್ಥಿಕ ಹೊರೆ ನಿಭಾಯಿಸಲು ಪೆಟ್ರೋಲ್, ಡೀಸೆಲ್, ಅಬಕಾರಿ ಮತ್ತು ವಿದ್ಯುತ್ ಮೇಲೆ ತೆರಿಗೆ ಹೆಚ್ಚಿಸಲಾಗಿದೆ. ಇದರಿಂದ ಮೂರೂವರೆ ಸಾವಿರ ಕೋಟಿ ಸಂಗ್ರಹವಾಗುವ ನಿರೀಕ್ಷೆ ಇದೆ. ಉಳಿದದ್ದನ್ನು ಸಾಲದ ಮೂಲಕ ಸಂಗ್ರಹಿಸುವ ಚಿಂತನೆ ನಡೆಸಿದ್ದಾರೆ ಎಂದು ಸುಧಾಕರ್ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ