ಮಲೆನಾಡು ಭಾಗದ ವಿದ್ಯುತ್ ಸಮಸ್ಯೆ ಬಗೆ ಹರಿಸಲು ಶೀಘ್ರ ಸಭೆ

 

ಬೆಂಗಳೂರು, ಜು.10- ಅತಿಯಾದ ಮಳೆಯಿಂದ ಮಲೆನಾಡು ಭಾಗದಲ್ಲಿ ಉಂಟಾಗುವ ವಿದ್ಯುತ್ ಸಮಸ್ಯೆ ಬಗೆಹರಿಸಲು ಇಂಧನ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸಭೆಗೆ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಬಾಳೆಹೊನ್ನೂರು ಹಾಗೂ ಚಿಕ್ಕಮಗಳೂರು ಭಾಗದ ವಿದ್ಯುತ್ ಉನ್ನತ್ತೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಶೃಂಗೇರಿಯಲ್ಲಿ ವಿದ್ಯುತ್ ಉಪಕೇಂದ್ರ ಸ್ಥಾಪನೆ, ಕಳಸಾ-ಬಾಳೆಹೊನ್ನೂರು ಮಾರ್ಗದ ಉನ್ನತ್ತೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಕಳೆದ ಜೂನ್ ಅಂತ್ಯಕ್ಕೆ ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲ್ಲೂಕುಗಳಲ್ಲಿ 721 ವಿದ್ಯುತ್ ಕಂಬಗಳು ಹಾನಿಗೀಡಾಗಿದ್ದು, 682 ವಿದ್ಯುತ್ ಕಂಬಗಳನ್ನು ಬದಲಾಯಿಸಲಾಗಿದೆ. ಮಳೆಯಿಂದಾಗಿ 72.1 ಕಿ.ಮೀ. ಉದ್ದದ ವಿದ್ಯುತ್ ತಂತಿಗಳು ಹಾಳಾಗಿದ್ದವು. ಈ ಪೈಕಿ 68.2 ಕಿ.ಮೀ. ಉದ್ದ ವಿದ್ಯುತ್ ತಂತಿಗಳನ್ನು ಬದಲಾಯಿಸಲಾಗಿದೆ ಎಂದು ತಿಳಿಸಿದರು.
ಮಲೆನಾಡು ಭಾಗದಲ್ಲಿ ಭೂಮಿಯೊಳಗೆ ಕೇಬಲ್ ಅಳವಡಿಸಿ ವಿದ್ಯುತ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಸಲಹೆಯನ್ನು ಪರಿಶೀಲಿಸುವುದಾಗಿ ಬಿಜೆಪಿಯ ಶಾಸಕ ಹರತಾಳ ಹಾಲಪ್ಪ ಅವರ ಪ್ರಶ್ನೆಗೆ ಮುಖ್ಯಮಂತ್ರಿಗಳು ಉತ್ತರಿಸಿದರು.
ವಿತರಣಾ ಕೇಂದ್ರಗಳ ಸ್ಥಾಪನೆಗೂ ಗಮನ ಹರಿಸಲಾಗುವುದು. ಸಾಗರ ತಾಲ್ಲೂಕಿನಲ್ಲಿ 157 ಹಾಗೂ ಹೊಸನಗರ ತಾಲ್ಲೂಕಿನಲ್ಲಿ 465 ವಿದ್ಯುತ್ ಕಂಬಗಳು ಸೇರಿದಂತೆ ಒಟ್ಟು 622 ವಿದ್ಯುತ್ ಕಂಬಗಳು ಹಾಳಾಗಿದ್ದು, ಎಲ್ಲಾ ಕಂಬಗಳನ್ನು ಬದಲಾಗಿಸಿದೆ ಎಂದರು.
ಕರ್ನಾಟಕ ವಿದ್ಯುತ್ ಚಕ್ತಿ ನಿಯಂತ್ರಣ ಆಯೋಗದ ನಿಯಮಾನುಸಾರ ಗ್ರಾಮೀಣ ಪ್ರದೇಶದಲ್ಲಿ 72 ಗಂಟೆಯೊಳಗೆ, ನಗರ ಪ್ರದೇಶದಲ್ಲಿ 24 ಗಂಟೆಯೊಳಗೆ ವಿಫಲವಾದ ಪರಿವರ್ತಕಗಳನ್ನು (ಟಿಸಿ) ಬದಲಾಯಿಸಲಾಗುತ್ತಿದೆ. ಒಂದು ವೇಳೆ ಟಿಸಿಗಳ ಬದಲಾವಣೆ ಹಾಗೂ ಸರಿಪಡಿಸುವಿಕೆಯಲ್ಲಿ ಲೋಪದೋಷಗಳಿದ್ದರೆ ಸರಿಪಡಿಸಲಾಗುವುದು. ಅಧಿಕಾರಿಗಳು ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ದೊಡ್ಡಬಳ್ಳಾಪುರದ ಶಾಸಕ ಟಿ.ವೆಂಕಟರಮಣಯ್ಯ ಅವರ ಪ್ರಶ್ನೆಗೆ ಮುಖ್ಯಮಂತ್ರಿಗಳು ಉತ್ತರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ