ತಮಿಳುನಾಡಿಗೆ ಕಾವೇರಿ ಹರಿಸಲು ಸಿಎಂ ಸೂಚನೆ

 

ಬೆಂಗಳೂರು, ಜು.10- ರಾಜ್ಯದಲ್ಲಿ ಉತ್ತಮ ಮಳೆಯಾಗಿರುವುದರಿಂದ ಕಾವೇರಿ ನದಿ ಪಾತ್ರದ ಜಲಾಶಯಗಳು ತುಂಬಿದ್ದು, ತಮಿಳುನಾಡಿಗೆ ಅಗತ್ಯವಾದಷ್ಟು ನೀರು ಬಿಡುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.
ಇತ್ತೀಚೆಗೆ ನಡೆದ ಕಾವೇರಿ ನೀರು ನಿರ್ವಹಣಾ ಮಂಡಳಿ ಸಭೆಯಲ್ಲಿ ತಮಿಳುನಾಡಿಗೆ ಜುಲೈ ತಿಂಗಳಲ್ಲಿ 34ಟಿಎಂಸಿ ನೀರು ಹರಿಸುವಂತೆ ಸೂಚಿಸಲಾಗಿದೆ. ಇನ್ನು 50 ಟಿಎಂಸಿ ನೀರಿಗೆ ತಮಿಳುನಾಡಿನಿಂದ ಬೇಡಿಕೆ ಬರುವ ಸಾಧ್ಯತೆ ಇದೆ. ಒಟ್ಟು ಜುಲೈ ಮತ್ತು ಆಗಸ್ಟ್‍ತಿಂಗಳಲಲಿ 84 ಟಿಎಂಸಿ ನೀರು ಪಡೆದುಕೊಳ್ಳಲು ತಮಿಳುನಾಡು ಸರ್ಕಾರ ಒತ್ತಡ ಹೇರುತ್ತಿದೆ.
ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಜುಲೈ ತಿಂಗಳಲ್ಲಿನ 31.24ಟಿಎಂಸಿ ನೀರು ಕೇಳಬೇಕಾದ ತನಿಳುನಾಡು ಸರ್ಕಾರ ಎರಡೂವರೆ ಟಿಎಂಸಿ ಹೆಚ್ಚುವರಿ ನೀರು ಕೇಳಿದೆ. ಇದಕ್ಕೆ ಸಭೆಯಲ್ಲಿ ಕರ್ನಾಟಕದ ¥ಪ್ರತಿನಿಧಿ ರಾಕೇಶ್‍ಸಿಂಗ್ ಅವರು ಪ್ಛ್ರತಿರೋಧ ವ್ಯಕ್ತಪಡಿಸಿದ್ದಾರೆ.
ಆದಾಗ್ಯೂ ಪ್ರಾಧಿಕಾರದ ಅಧ್ಯಕ್ಷ ಮಸೂದ್ ಹುಸೇನ್ 34 ಟಿಎಂಸಿ ನೀರು ಬಿಡುವಂತೆ ಸೂಚಿಸಿರುವ ಕರ್ನಾಟಕದ ಪಾಲಿಗೆ ನುಂಗಲಾರದ ತುತ್ತಾಗಿದೆ. ಸದಸ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಸಮೃದ್ಧಿ ಮಳೆಯಾಗಿ ಜಲಾಶಯಗಳು ತುಂಬಿ ಹರಿಯುತ್ತಿರುವುದರಿಂದ ಜುಲೈ ತಿಂಗಳ ಪಾಲಿನ ನೀರು ಬಿಡಲು ಯಾವುದೇ ಸಮಸ್ಯೆ ಇಲ್ಲ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನೀರು ಹರಿಸಲು ಸೂಚನೆ ನೀಡಿದ್ದಾರೆ. ಅದರಂತೆ ಈಗಾಗಲೇ ತಮಿಳುನಾಡಿಗೆ ನೀರು ಹರಿದು ಹೋಗುತ್ತಿದೆ.
ಆದರೆ, ಮಳೆಗಾಲ ಮುಗಿದ ನಂತರ ಸೆಪ್ಟೆಂಬರ್, ಅಕ್ಟೋಬರ್ ತಿಂಗಳಿನಲ್ಲಿ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇರಲಿದೆ. ಆ ಸಂದರ್ಭದಲ್ಲಿ ತಮಿಳುನಾಡಿನಿಂದ ಇದೇ ರೀತಿಯ ಬೇಡಿಕೆಗಳು ಬಂದರೆ ಪರಿಸ್ಥಿತಿ ನಿಭಾಯಿಸುವುದು ಹೇಗೆ ಎಂಬ ಚಿಂತೆ ಕಾಡಲಾರಂಭಿಸಿದೆ.
ಸದ್ಯಕ್ಕೆ ನೀರು ಬಿಡುವ ಮೂಲಕ ಪ್ರಾಧಿಕಾರದ ಆದೇಶ ಪಾಲನೆ ಮಾಡಿ ಸುಪ್ರೀಂಕೋರ್ಟ್‍ಗೆ ಮೇಲ್ಮನೆ ಸಲ್ಲಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಹೀಗಾಗಿ ಎಚ್ಚರಿಕೆ ಹೆಜ್ಜೆ ಇಡಲು ಕುಮಾರಸ್ವಾಮಿ ನಿರ್ಧರಿಸಿದ್ದು, ಈಗ ತಮಿಳುನಾಡಿಗೆ ನೀರು ಹರಿಸಲು ಸೂಚನೆ ನೀಡಿದ್ದಾರೆ.
ಮಳೆ ಬಂದು ನೀರು ಸಂಗ್ರಹವಾದಾಗ ತಮಿಳುನಾಡಿಗೆ ನೀರು ಬಿಟ್ಟಿದ್ದೇವೆ. ಮಳೆ ಇಲ್ಲದ ಕಾಲದಲ್ಲಿ ನೀರು ಬಿಡಲು ಸಾಧ್ಯವಿಲ್ಲ ಎಂಬ ವಾದ ಮಂಡಿಸಲು ಅನುಕೂಲವಾಗುವಂತಹ ವಾತಾವರಣವನ್ನು ಸರ್ಕಾರ ಸೃಷ್ಟಿಸುತ್ತಿದೆ.
ಇನ್ನೊಂದೆಡೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೇರವಾಗಿ ತನ್ನ ಪ್ರತಿನಿಧಿಗಳನ್ನು ಜಲಾಧಶಯಗಳ ಬಳಿ ಕಳುಹಿಸಿದ್ದು, ಅಲ್ಲಿ ನೀರು ಸಂಗ್ರಹದ ವಸ್ತು ಸ್ಥಿತಿಯ ಬಗ್ಗೆ ವರದಿ ಪಡೆಯುತ್ತಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನೀರಿಲ್ಲ ಎಂದು ಸಬೂಬು ಹೇಳಿ ನೀರು ಹರಿಸದೇ ಇದ್ದರೆ ಅದು ನ್ಯಾಯಾಂಗ ನಿಂದನೆಯಾಗುವ ಆತಂಕವಿದೆ. ಸಮೃದ್ಧವಾಗಿ ಮಳೆಯಾಗಿರುವುದರಿಂದ ನೀರನ್ನು ಹರಿಸಲು ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ