ಬೆಂಗಳೂರು, ಜು.9-ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಉದ್ದಿಮೆದಾರರಿಗೆ ನೀಡಲಾಗುವ ಮಳಿಗೆ, ಫ್ಲ್ಯಾಟ್, ಗೋದಾಮು, ಅಂಗಡಿ, ನಿವೇಶನಗಳಿಗೆ ಶೇ.50ರಷ್ಟು ರಿಯಾಯಿತಿಯನ್ನು ಹಂಚಿಕೆ ಮಾಡಲಾಗುವ ಸಂದರ್ಭದಲ್ಲೇ ನೀಡಲಾಗುತ್ತದೆ ಎಂದು ಸಣ್ಣ ಕೈಗಾರಿಕೆಗಳ ಸಚಿವ ಎಸ್.ಆರ್.ಶ್ರೀನಿವಾಸ್ ವಿಧಾನಸಭೆಗೆ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಶಾಸಕ ರಾಜೀವ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಾಮಾನ್ಯ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ, ಅಂಗವಿಕಲ, ಮಾಜಿ ಸೈನಿಕ, ಮಹಿಳಾ ಉದ್ಯಮಶೀಲರಿಗೆ ಕೈಗಾರಿಕಾ ನೀತಿ ಅನ್ವಯ ಶೇ.10 ರಿಂದ 35ರವರೆಗೆ ಬಂಡವಾಳ ಹೂಡಿಕೆ ಸಹಾಯಧನವನ್ನು ಭೂಮಿ, ಕಟ್ಟಡ ಮತ್ತು ಯಂತ್ರೋಪಕರಣಗಳ ಮೇಲೆ ನೀಡಲಾಗುತ್ತದೆ ಎಂದರು.
ಹೊಸ ಕೈಗಾರಿಕಾ ವಸಾಹತುವಿನಲ್ಲಿ ಭೂಮಿ ಸ್ವಾಧೀನ ಪಡಿಸಿಕೊಂಡ ವೆಚ್ಚ, ಅದಕ್ಕೆ ತಗಲುವ ಸ್ಟ್ಯಾಂಪ್ ಡ್ಯೂಟಿ ಮತ್ತು ಕೊಳಗೇರಿ ಉಪಕರ ಇವುಗಳನ್ನು ಆಧರಿಸಿ ಒಟ್ಟು ಮೌಲ್ಯವನ್ನು ನಿರ್ಧರಿಸಲಾಗುವುದು. ಕೈಗಾರಿಕಾ ಜಮೀನಿಗೆ ಸಿವಿಲ್ ಮತ್ತು ಎಲೆಕ್ಟ್ರಿಕಲ್ ಕಾಮಗಾರಿಗಳ ಅಭಿವೃದ್ಧಿಗೆ ಮಾಡಿರುವ ವೆಚ್ಚ, ಶಾಸನಬದ್ಧ ಪಾವತಿಗಳು ಮತ್ತು ನಿಗಮದ ಸೇವಾ ಶುಲ್ಕಗಳನ್ನು ಕೂಡಿಸಿ ಒಟ್ಟು ವೆಚ್ಚ ನಿರ್ಧರಿಸಲಾಗುವುದು ಎಂದು ಹೇಳಿದರು.