ಅತಿವೃಷ್ಠಿ ಪಿಡಿತ ಕರಾವಳಿ ಜಿಲ್ಲೆಗಳಿಗೆ ವಿಶೇಷ ಪ್ಯಾಕೇಜ್‍ಗೆ ಚಿಂತನೆ

 

ಬೆಂಗಳೂರು, ಜು.9-ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ವಿಶೇಷ ಪ್ಯಾಕೇಜ್ ನೀಡಲು ಜಿಲ್ಲಾಧಿಕಾರಿಯವರ ವರದಿಯ ನಂತರ ಪರಿಶೀಲನೆ ನಡೆಸುವುದಾಗಿ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ವಿಧಾನಸಭೆಯ ಶೂನ್ಯವೇಳೆಯಲ್ಲಿ ಶಾಸಕರಾದ ಸುನೀಲ್‍ಕುಮಾರ್, ರಘುಪತಿಭಟ್ ಅವರು ವಿಷಯ ಪ್ರಸ್ತಾಪಿಸಿ ಮಳೆಯಿಂದಾಗಿರುವ ಅನಾಹುತಗಳ ಬಗ್ಗೆ ಗಮನಸೆಳೆದರು.
ಮನೆ ಬಿದ್ದಾಗ ಪರಿಹಾರದ ಮೊತ್ತವನ್ನು ಹೆಚ್ಚಿಸುವಂತೆ ಮತ್ತು ತುರ್ತು ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಕೈಗೆತ್ತಿಕೊಳ್ಳುವಂತೆ ಒತ್ತಾಯಿಸಿದರು.
ಇದಕ್ಕೆ ಉತ್ತರ ನೀಡಿದ ಸಚಿವ ದೇಶಪಾಂಡೆ ಅವರು, ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ದಕ್ಷಿಣ ಕನ್ನಡದಲ್ಲಿ 2, ಉಡುಪಿಯಲ್ಲಿ ಒಂದು ಸೇರಿ ಒಟ್ಟು ಮೂರು ಜೀವ ಹಾನಿಯಾಗಿದೆ. ಮೂರು ದಿನಗಳಿಂದೀಚೆಗೆ ದಕ್ಷಿಣ ಕನ್ನಡದಲ್ಲಿ 14, ಉಡುಪಿಯಲ್ಲಿ 11 ಮನೆಗಳು ಹಾನಿಗೊಳಗಾಗಿವೆ. ಈಗಾಗಲೇ ಸರ್ಕಾರ ತುರ್ತು ಕ್ರಮಗಳನ್ನು ಕೈಗೊಂಡಿದ್ದು, ಪ್ರಕೃತಿ ವಿಕೋಪ ನಿರ್ವಹಣಾ ದಳವನ್ನು ರವಾನಿಸಿದೆ ಎಂದರು.
ಇನ್ನು ನಾಲ್ಕೈದು ದಿನಗಳಲ್ಲಿ ಮತ್ತಷ್ಟು ಮಳೆಯಾಗುವ ಸಾಧ್ಯತೆ ಇದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಕೈಗೊಂಡಿದ್ದೇವೆ. ಮನೆ ಸಂಪೂರ್ಣವಾಗಿ ಬಿದ್ದರೆ 95,000, ಭಾಗಶಃ ಹಾನಿಯಾದರೆ 5,200, ಶೇ.75ರಷ್ಟು ಹಾನಿಯಾದರೆ 75 ಸಾವಿರದವರೆಗೂ ಪರಿಹಾರ ನೀಡುತ್ತಿದ್ದೇವೆ. ಏಪ್ರಿಲ್ 1ರಿಂದೀಚೆಗೆ ಬಿದ್ದಿರುವ ಮನೆಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಒಂದು ಲಕ್ಷ ರೂ. ಪರಿಹಾರ ನೀಡುತ್ತಿದ್ದೇವೆ. ಆಶ್ರಯ ಸೇರಿದಂತೆÉ ಸರ್ಕಾರದ ಯೋಜನೆಗಳಲ್ಲಿ ಪಡೆದಿರುವ ಮನೆಗಳು ಬಿದ್ದು ಹೋಗಿದ್ದರೆ 20 ವರ್ಷದವರೆಗೆ ಅವರಿಗೆ ಹೊಸದಾಗಿ ಮನೆಕಟ್ಟಲು ಅನುದಾನ ನೀಡಲು ಅವಕಾಶವಿಲ್ಲ. ಆದರೆ ಹಾನಿ ನಿಯಮವನ್ನು ಸರಳೀಕರಿಸಿ ಹೊಸದಾಗಿ ಮನೆಗಳನ್ನು ಕಟ್ಟಿಸಿಕೊಡಲಾಗುತ್ತಿದೆ ಎಂದು ಹೇಳಿದರು.
ಪರಿಹಾರದ ಕಾಮಗಾರಿಗಳಿಗೆ ಹಣದ ಕೊರತೆ ಇಲ್ಲ. ದಕ್ಷಿಣ ಕನ್ನಡದಲ್ಲಿ 6.79 ಕೋಟಿ, ಉಡುಪಿಯಲ್ಲಿ 6.05 ಕೋಟಿ, ಮಡಿಕೇರಿಯಲ್ಲಿ 4 ಕೋಟಿ ಇದೆ ಎಂದು ಸಚಿವರು ವಿವರಿಸಿದರು.
ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೀಡುವ ಒಂದು ಲಕ್ಷ ರೂ. ವಿಶೇಷ ಪ್ರಕರಣವಾಗುತ್ತದೆಯೇ ಹೊರತು ಅದು ನಿರಂತರವಾಗಿ ನೀಡುವ ನಿಯಮ ಇಲ್ಲ ಎಂದು ಜೆ.ಸಿ.ಮಾಧುಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು.
ಮನೆಗಳು ಹಾನಿಗೊಳಗಾದಾಗ ಮುಖ್ಯಮಂತ್ರಿ ನಿಧಿಯಿಂದ ಒಂದು ಲಕ್ಷ ರೂ. ನೀಡುವುದನ್ನು ಖಾಯಂ ನಿಯಮ ಮಾಡುತ್ತಿರುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ