ಹರಪನಹಳ್ಳಿ ಬಳ್ಳಾರಿಗೆ ಸೇರಿದ್ದು: ದೇಶಪಾಂಡೆ

 

ಬೆಂಗಳೂರು, ಜು.9-ಹರಪ್ಪನಹಳ್ಳಿ ತಾಲೂಕು ಬಳ್ಳಾರಿ ಜಿಲ್ಲೆಗೆ ಸೇರ್ಪಡೆಯಾಗಿದೆ. ಸಂವಿಧಾನ ತಿದ್ದುಪಡಿ 371(ಜೆ) ಪ್ರಕಾರ ಈ ತಾಲೂಕಿಗೆ ಎಲ್ಲಾ ಸೌಲಭ್ಯಗಳು ಸಿಗಲಿವೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಸ್ಪಷ್ಟಪಡಿಸಿದ್ದಾರೆ.
ವಿಧಾನಸಭೆಯ ಶೂನ್ಯವೇಳೆಯಲ್ಲಿ ಶಾಸಕ ಜಿ.ಕರುಣಾಕರರೆಡ್ಡಿ ಅವರು ವಿಷಯ ಪ್ರಸ್ತಾಪಿಸಿ ದಾವಣಗೆರೆ ಜಿಲ್ಲೆ ಹೊಸದಾಗಿ ರಚನೆಯಾದ ವೇಳೆ ಹರಪ್ಪನಹಳ್ಳಿ ತಾಲೂಕನ್ನು ಬಳ್ಳಾರಿಯಿಂದ ಬೇರ್ಪಡಿಸಿ ದಾವಣಗೆರೆಗೆ ಸೇರಿಸಲಾಯಿತು. ಇತ್ತೀಚೆಗೆ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಲು ಕಲಂ 371(ಜೆ) ತಿದ್ದುಪಡಿಯಾದಾಗ ಸಿದ್ದರಾಮಯ್ಯ ಸರ್ಕಾರ ಹರಪ್ಪನಹಳ್ಳಿಯನ್ನು ಮತ್ತೆ ಬಳ್ಳಾರಿ ಜಿಲ್ಲೆಗೆ ಸೇರ್ಪಡೆ ಮಾಡಿದೆ. ಆದರೆ ಹಲವಾರು ಗೊಂದಲಗಳು ಮುಂದುವರೆದಿದೆ. ಪಹಣಿಯಲ್ಲಿ ಬಳ್ಳಾರಿ ಜಿಲ್ಲೆ ಎಂದು ನಮೂದಾಗುತ್ತಿದೆ. ಸಭೆಗಳನ್ನು ದಾವಣಗೆರೆ ಜಿಲ್ಲಾಧಿಕಾರಿಯೂ ಕರೆಯುತ್ತಿದ್ದಾರೆ, ಬಳ್ಳಾರಿ ಜಿಲ್ಲಾಧಿಕಾರಿಯೂ ಕರೆಯುತ್ತಿದ್ದಾರೆ. ಈ ಗೊಂದಲವನ್ನು ಸರಿಪಡಿಸಿ ಹರಪ್ಪನಹಳ್ಳಿ ತಾಲೂಕಿಗೆ ವಿಶೇಷ ಸ್ಥಾನಮಾನ ಸಿಗಲಿದೆಯೇ ಎಂದು ಕೇಳಿದರು.
ಇದಕ್ಕೆ ಉತ್ತರಿಸಿದ ಸಚಿವ ದೇಶಪಾಂಡೆ ಅವರು, ತಾವು ಹರಪ್ಪನಹಳ್ಳಿ ತಾಲೂಕು ಬಳ್ಳಾರಿ ಜಿಲ್ಲೆಗೆ ಸೇರಿದೆ. ವಿಶೇಷ ಸ್ಥಾನಮಾನದ ಎಲ್ಲ ಸೌಲಭ್ಯಗಳು ಈ ತಾಲೂಕಿಗೆ ಸಿಗಲಿದೆ ಎಂದು ಸ್ಪಷ್ಟವಾಗಿ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ