ಮಾವಿಗೆ ಎರಡುವರೆ ಸಾವಿರ ಬೆಂಬಲ ಬೆಲೆ

 

ಬೆಂಗಳೂರು, ಜು.9- ಅತಿಯಾದ ಮಳೆ ಹಾಗೂ ಬೆಲೆ ಕುಸಿತದಿಂದ ಸಂಕಷ್ಟಕ್ಕೀಡಾಗಿರುವ ಮಾವು ಬೆಳೆಗಾರರ ನೆರವಿಗೆ ಮುಂದಾಗಿರುವ ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಒಂದು ಟನ್ ಮಾವಿಗೆ ಎರಡೂವರೆ ಸಾವಿರ ರೂ. ಬೆಂಬಲ ಬೆಲೆ ಘೋಷಣೆ ಮಾಡಿದೆ.
ಇಂದು ಬೆಳಗ್ಗೆ ವಿಧಾನಸಭೆ ಅಧಿವೇಶನ ಪ್ರಾರಂಭವಾಗುತ್ತಿದ್ದಂತೆ ಸರ್ಕಾರದ ನಿರ್ಧಾರವನ್ನು ಪ್ರಕಟಿಸಿದ ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ, ಪ್ರತಿ ಕೆಜಿಗೆ ಎರಡೂವರೆ ರೂ. ಬೆಂಬಲ ಬೆಲೆ ಘೋಷಣೆ ಮಾಡಲಾಗಿದೆ.
ಶ್ರೀನಿವಾಸಪುರದಲ್ಲಿ ಮಾವಿನ ಹಣ್ಣುಗಳನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸುತ್ತಿದ್ದು, ಇದನ್ನು ಕೈ ಬಿಡಬೇಕು. ಆಂಧ್ರಪ್ರದೇಶದ ಮಾದರಿಯಲ್ಲಿ ಬೆಂಬಲ ಬೆಲೆ ನೀಡಲಾಗುವುದು ಎಂದರು.
ಮಾವು ಬೆಳೆ ಪ್ರಮಾಣ ಕಡಿಮೆ ಇದ್ದರೂ ತಡವಾದ ಮಳೆ ಹಾಗೂ ಮಾರುಕಟ್ಟೆಗೆ ಹೆಚ್ಚಿನ ಮಾವಿನ ಫಸಲು ಬಂದಿದ್ದರಿಂದ ಬೆಲೆ ಕುಸಿತವಾಗಿದೆ. ಹತಾಶರಾದ ರೈತರು ರಸ್ತೆಗೆ ಮಾವಿನ ಹಣ್ಣು ಸುರಿದು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಎರಡು ಮಾತ್ರ ಮಾವು ಸಂಸ್ಕರಣಾ ಘಟಕಗಳಿವೆ. ಆದರೆ, ನೆರೆಯ ಆಂಧ್ರ ಪ್ರದೇಶದಲ್ಲಿ 59 ಸಂಸ್ಕರಣಾ ಘಟಕಗಳು ಇವೆ ಎಂದು ತಿಳಿಸಿದರು.
ಸಂಸ್ಕರಣಾ ಘಟಕ ಸ್ಥಾಪನೆ:
ಮುಂದಿನ ದಿನಗಳಲ್ಲಿ ಮಾವು ಸಂಸ್ಕರಣಾ ಘಟಕ ಸ್ಥಾಪನೆ ಮಾಡುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಮಾವಿಗೆ ಬೆಂಬಲ ಬೆಲೆ ನೀಡುವ ಬಗ್ಗೆ ಕೃಷಿ ಸಚಿವರು ಹೇಳಿಕೆ ನೀಡುವ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿಗಳು, ಮಾವು ಬೆಳೆಗಾರರ ಸಂಕಷ್ಟಕ್ಕೆ ತಕ್ಷಣಕ್ಕೆ ನೆರವಿಗೆ ಬರಲು ತೀರ್ಮಾನಿಸಿ ಬೆಂಬಲ ಬೆಲೆ ನೀಡಲಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಮಾವಿಗೆ ಬೆಂಬಲ ಬೆಲೆ ನೀಡಲಾಗುತ್ತಿದೆ ಎಂದರು.
ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದು, ನಮ್ಮ ರಾಜ್ಯದಲ್ಲಿ ಸಣ್ಣ ಪ್ರಮಾಣದ ಎರಡು ಮಾವು ಸಂಸ್ಕರಣಾ ಘಟಕಗಳು ಮಾತ್ರ ಇವೆ. ಮಹಾರಾಷ್ಟ್ರದಲ್ಲಿ ದೊಡ್ಡ ಪ್ರಮಾಣದ ಸಂಸ್ಕರಣಾ ಘಟಕಗಳಿವೆ. ಅಲ್ಲಿನ ಜೈನ್ ಕಂಪೆನಿಯ 50ಸಾವಿರ ಮೆಟ್ರಿಕ್ ಟನ್ ಸಂಸ್ಕರಿಸಿದ ಮಾವಿನ ಫಸಲು ಮಾರಾಟವಾಗಿಲ್ಲ. ಅಮೆರಿಕದಲ್ಲೂ ಹೆಚ್ಚಿನ ಪ್ರಮಾಣದ ಮಾವಿನ ಫಸಲು ಬಂದಿದ್ದು, ಇದೇ ರೀತಿಯ ಸಮಸ್ಯೆ ಉಂಟಾಗಿದೆ. ನೆರೆಯ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಸಂಪರ್ಕಿಸಲು ಪ್ರಯತ್ನಿಸಲಾಯಿತು. ಆದರೆ, ಅವರು ಸಿಂಗಾಪುರ ಪ್ರವಾಸದಲ್ಲಿದ್ದಾರೆ. ಚಿತ್ತೂರಿನಲ್ಲಿ ಹೊರ ರಾಜ್ಯದ ಮಾವಿಗೆ ನಿಷೇಧ ಹೇರಲಾಗಿದೆ. ಅಲ್ಲೂ ಕೂಡ ಮಾವಿನ ಫಸಲು ಹೆಚ್ಚಾಗಿದೆ. ಹೀಗಾಗಿ ಬಂದ್ ನಡೆಸುತ್ತಿರುವ ಶ್ರೀನಿವಾಸ್‍ಪುರಕ್ಕೆ ಭೇಟಿ ಕೊಟ್ಟು ಬಂದ್ ವಾಪಸ್ ಪಡೆಯಲು ಮನವೊಲಿಸುವಂತೆ ಕೃಷಿ ಸಚಿವರಿಗೆ ಸೂಚಿಸಲಾಗಿದೆ. ಮಾವಿಗೆ ಬೆಂಬಲ ಬೆಲೆ ನೀಡಲು ರಾಜ್ಯ ಸರ್ಕಾರಕ್ಕೆ 17ರಿಂದ 20 ಕೋಟಿ ರೂ. ಹೊರೆಯಾಗಲಿದೆ ಎಂದರು.
ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಸ್ಪೀಕರ್, ಮಾವು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿ ಬೆಂಬಲ ಬೆಲೆ ಘೋಷಣೆ ಮಾಡಿದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.
ಬೆಂಬಲ ಬೆಲೆ ಹಣವನ್ನು ಎಪಿಎಂಸಿಗಳ ಮೂಲಕವೇ ರೈತರಿಗೆ ನೀಡಬೇಕು. ಅದಕ್ಕೆ ಸಂಬಂಧಿಸಿದ ಪ್ರಮಾಣ ಪತ್ರವನ್ನು ರೈತರಿಗೆ ನೀಡಬೇಕು. ಬೆಂಬಲ ಬೆಲೆಯಡಿ ಹಣ ದುರ್ಬಳಕೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಸಲಹೆ ಮಾಡಿದರು.
ಆಂಧ್ರ ಪ್ರದೇಶದಲ್ಲಿ ಸಾಕಷ್ಟು ಸಂಸ್ಕರಣಾ ಘಟಕಗಳಿದ್ದರೂ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ಮಾವಿಗೆ ನಿಷೇಧ ಹೇರಿರುವುದರಿಂದ ನಮ್ಮ ಮಾವು ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ. ತಕ್ಷಣವೇ ಸರ್ಕಾರ ಸ್ಪಂದಿಸಿ ಬೆಂಬಲ ಬೆಲೆ ಘೋಷಣೆ ಮಾಡಿರುವುದಕ್ಕೆ ರೈತರ ಪರವಾಗಿ ಅಭಿನಂದಿಸುವುದಾಗಿ ರಮೇಶ್‍ಕುಮಾರ್ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ