ಆಗ ಪವಿತ್ರವಾಗಿತ್ತೆ ? ಬಿಜೆಪಿಗೆ ಸಿಎಂ ಪ್ರಶ್ನೆ

 

ಬೆಂಗಳೂರು, ಜು.9- ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಅಪವಿತ್ರ ಎಂದು ಹೇಳುತ್ತಿರುವ ಬಿಜೆಪಿಯವರು 2006ರಲ್ಲಿ ಜೆಡಿಎಸ್ ಜತೆ ಬಿಜೆಪಿ ಸರ್ಕಾರ ರಚಿಸಿದಾಗ ಪವಿತ್ರವಾಗಿತ್ತೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತು ನಡೆದ ಚರ್ಚೆಗೆ ಇಂದು ಉತ್ತರ ನೀಡಿದ ಮುಖ್ಯಮಂತ್ರಿಗಳು, ರಾಜಕೀಯ ಟೀಕೆಗಳಿಗೆ ಅತಿ ತೀಕ್ಷ್ಣವಾಗಿ ಪ್ರತ್ಯುತ್ತರಿಸಿದರು.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಐದು ವರ್ಷ ಅಧಿಕಾರ ನಡೆಸಲಿದೆ. ಅವಧಿ ಪೂರ್ವ ಚುನಾವಣೆಗೆ ಅವಕಾಶ ನೀಡುವುದಿಲ್ಲ. ಯಾವ ಶಾಸಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಪವಿತ್ರವಾದದ್ದು, ಸಂವಿಧಾನ ಬಾಹೀರ ಎಂದು ಬಿಜೆಪಿಯವರು ಟೀಕೆಗಳನ್ನು ಮಾಡಿದ್ದಾರೆ. ನಾನು ಟೀಕೆಗಳನ್ನು ನಕಾರಾತ್ಮಕವಾಗಿ ತೆಗೆದುಕೊಂಡಿದ್ದೇನೆ. ಯಾರ ವಿರುದ್ಧವೂ ಆಕ್ರೋಶಗೊಳ್ಳುವುದಿಲ್ಲ ಎಂದರು.
37 ಮಂದಿ ಶಾಸಕರಿರುವ ಜೆಡಿಎಸ್‍ಗೆ 79 ಮಂದಿ ಶಾಸಕರಿರುವ ಕಾಂಗ್ರೆಸ್‍ನವರು ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಟ್ಟಿದ್ದಕ್ಕಾಗಿ ಬಿಜೆಪಿಯವರು ಭಾರೀ ಟೀಕೆ ಮಾಡಿದ್ದಾರೆ. ಹಿಂದೆ 2006ರಲ್ಲಿ ಕೂಡ ನನ್ನ ಜತೆ ಕೇವಲ 38ಮಂದಿ ಶಾಸಕರಿದ್ದರು. ನಮ್ಮ ಪಕ್ಷದ ಒಂದು ಗುಂಪು ಹೊರ ಬಂದಾಗ 79 ಮಂದಿ ಶಾಸಕರಿದ್ದ ಬಿಜೆಪಿ ಐದು ಮಂದಿ ಜೆಡಿಎಸ್ ಶಾಸಕರು ಸೇರಿ ಒಟ್ಟು 84 ಮಂದಿ ಬೆಂಬಲ ಕೊಟ್ಟು ನನ್ನನ್ನು ಸಿಎಂ ಮಾಡಿದ್ದರು.
ನಾನು ಆಗ ಇವರ ಬಳಿ ಸಿಎಂ ಮಾಡಿ ಎಂದು ಕೇಳಿರಲಿಲ್ಲ. ವಿಧಾನಸಭೆಯ ಸಭಾಂಗಣದ ಮೂಲೆಯಲ್ಲಿ ಕೂರುತ್ತಿದ್ದೆ. ಆಗಲೂ ವಿರೋಧ ಪಕ್ಷದ ನಾಯಕರಾಗಿದ್ದ ಬಿ.ಎಸ್.ಯಡಿಯೂರಪ್ಪನವರು ಒಂದು ಚೀಟಿ ಕಳುಹಿಸಿದ್ದರು. ನನ್ನನ್ನು ಭೇಟಿಯಾಗಿ ಎಂದು ಮನವಿ ಮಾಡಿದ್ದರು. ನಾನು ಅವರ ಮನೆಯಲ್ಲಿ ಹೋಗಿ ಭೇಟಿ ಮಾಡಿದ್ದೆ. ಹಲವಾರು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದೆವು. ನಂತರ ಸಿ.ಎಂ.ಉದಾಸಿ, ಗೋವಿಂದಕಾರಜೋಳ ಬಂದು ನನ್ನ ಬಳಿ ಚರ್ಚೆ ಮಾಡಿದ್ದರು. ಸಮ್ಮಿಶ್ರ ಸರ್ಕಾರದ ಬಗ್ಗೆ ಚರ್ಚೆ ಮಾಡಿದ್ದರು. ನಂತರ ನನ್ನನ್ನು ಮುಖ್ಯಮಂತ್ರಿ ಮಾಡಿದರು. ಆಗ ಅಪವಿತ್ರ ಆಗಿರಲಿಲ್ಲವೆ ಎಂದು ಪ್ರಶ್ನಿಸಿದರು.
ಅಪ್ಪ-ಮಕ್ಕಳು ಸೇರಿ ಸರ್ಕಾರ ರಚಿಸಿದರು ಎಂದು ಹೇಳುತ್ತೀರಾ. ವಾಸ್ತವ ನಿಮಗೆ ಗೊತ್ತೆ? ದೇವೇಗೌಡರು ಬಿಜೆಪಿ ಜತೆ ಸರ್ಕಾರ ಬೇಡ, ಚುನಾವಣೆಗೆ ಹೋಗೋಣ ಎಂದಿದ್ದರು. ಆಗ ನನ್ನ ಮೇಲೆ ಒತ್ತಡ ಹಾಕಿದ್ದವರು ಯಾರು? ಸರ್ಕಾರ ರಚಿಸುವಂತೆ ಹೇಳಿದ್ದವರು ಯಾರು ಎಂದು ಪುನರುಚ್ಚರಿಸಿದರು.
ಈಗಿನ ಮೈತ್ರಿ ಸರ್ಕಾರಕ್ಕೆ ಅಪ್ಪ-ಅಮ್ಮ ಇಲ್ಲ ಎಂದು ಟೀಕೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರೇ ಅಪ್ಪ-ಅಮ್ಮ. ನನ್ನದು ಸಾಂದರ್ಭಿಕ ಸರ್ಕಾರ ನಿಜ. ಆದರೆ, ವಿಕಲಚೇತನ ಸರ್ಕಾರವಲ್ಲ. ಮಹಾಭಾರತದಲ್ಲಿ ಕರ್ಣ ಕೂಡ ಸಾಂದರ್ಭಿಕ ಶಿಶು. ಕುಂತಿ ದೇವರು ಕೊಟ್ಟ ವರವನ್ನು ಪರೀಕ್ಷೆ ಮಾಡಲು ಹೋಗಿ ಮಗು ಪಡೆದು ನದಿಯಲ್ಲಿ ತೇಲಿಬಿಟ್ಟರು. ಅದನ್ನು ಬೆಸ್ತರ ಕುಟುಂಬ ಸಾಕಿದ್ದು, ಮುಂದೆ ದುರ್ಯೋೀಧನ ಕರ್ಣನಿಗೆ ಸ್ಥಾನಮಾನ ನೀಡಿದ. ಆದರೆ, ಕರ್ಣ ಅನುಭವಿಸಿದ ಯಾತನೆ ಅವರಿಗೆ ಗೊತ್ತು. ಈಗಿನ ಸಂದರ್ಭದಲ್ಲಿ ಜನರು ಕೊಟ್ಟ ತೀರ್ಪನ್ನು ನೋಡಿದರೆ ನಾನು ಸಿಎಂ ಆಗುತ್ತೇನೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಸ್ವತಃ ನನಗೆ ನಂಬಿಕೆ ಇರಲಿಲ್ಲ ಎಂದು ಹೇಳಿದರು.
ಯಡಿಯೂರಪ್ಪ ಅವರು ಬಹಳ ಗೌರವ, ಪ್ರೀತಿಯಿಂದ ನನ್ನ ಬಗ್ಗೆ ಮಾತನಾಡಿದ್ದಾರೆ. ದಗಲ್‍ಬಾಜಿ ಎಂಬ ಪದಗಳನ್ನೆಲ್ಲಾ ಬಳಸಿದ್ದಾರೆ. ಆದರೆ, ನಾನು ಪ್ರತಿಭಟಿಸಲಿಲ್ಲ. ಮುಕ್ತ ಮನಸ್ಸಿನಿಂದ ಸ್ವೀಕರಿಸಿದ್ದೇನೆ ಎಂದರು.
ಜಾರ್ಜ್‍ರನ್ನು ಸಮರ್ಥಿಸಿಕೊಂಡ ಸಿಎಂ:
ಈ ಹಿಂದೆ ಎಂ.ಕೆ.ಗಣಪತಿ ಅವರ ಅಸಹಜ ಸಾವಿನ ಪ್ರಕರಣದಲ್ಲಿ ಹಿಂದಿನ ಸರ್ಕಾರವನ್ನು ನಾನು ಟೀಕೆ ಮಾಡಿದ್ದೇನೆ. ಸಿಬಿಐ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದೆ. ವಿರೋಧ ಪಕ್ಷದಲ್ಲಿದ್ದಾಗ ನಾನು ನನ್ನ ಕರ್ತವ್ಯ ಮಾಡಿದ್ದೇನೆ. ನಂತರದ ಬೆಳೆವಣಿಗೆಯಲ್ಲಿ ಸಿಬಿಐ ತನಿಖೆ ನಡೆದು ಡಿ.ಕೆ.ರವಿ ಸಾವಿನ ಪ್ರಕರಣದಲ್ಲಿ ಜಾರ್ಜ್ ಅವರ ಪಾತ್ರವಿಲ್ಲ ಎಂಬುದು ಸ್ಪಷ್ಟವಾಗಿದೆ. ಗಣಪತಿ ಅವರ ಪ್ರಕರಣದ ಬಗ್ಗೆ ಇನ್ನೂ ವರದಿ ಬಂದಿಲ್ಲ. ಆದರೆ, ಅವರ ಪಾತ್ರ ಇಲ್ಲ. ಅಂದ ಮಾತ್ರಕ್ಕೆ ಜಾರ್ಜ್ ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದೇನೆ ಎಂದು ಭಾವಿಸಬೇಕಿಲ್ಲ. ಜಾರ್ಜ್ ಅವರನ್ನು ಸಂಪುಟಕ್ಕೆ ತೆಗೆದುಕೊಂಡು ನಾನೇನು ಅಪರಾಧ ಮಾಡಿಲ್ಲ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ತನಿಖಾ ಸಂಸ್ಥೆಗಳು ನೀಡಿದ ವರದಿಗಳನ್ನು ನಾವು ಗೌರವಿಸಬೇಕು ಎಂದರು.
ರಾಜ್ಯಪಾಲರ ಭಾಷಣ ದಿಕ್ಕುದೆಸೆ ಇಲ್ಲದ್ದು ಎಂದು ಬಿಜೆಪಿಯವರು ಟೀಕೆ ಮಾಡುತ್ತಲೇ 16ಗಂಟೆ 26 ನಿಮಿಷ ಚರ್ಚೆ ಮಾಡಿದ್ದಾರೆ. ಇನ್ನು ಬಿಜೆಪಿಯವರಿಗೆ ಮೆಚ್ಚುಗೆಯಾಗಿದ್ದರೆ ಎಷ್ಟು ಗಂಟೆ ಚರ್ಚೆ ಮಾಡುತ್ತಿದ್ದರು ಎಂದು ಸಿಎಂ ಲೇವಡಿ ಮಾಡಿದರು.
ರಾಜ್ಯಪಾಲರ ಭಾಷಣದ ಮೇಲೆ ಕಾಂಗ್ರೆಸ್ 4, ಜೆಡಿಎಸ್‍ನ 5 ಹಾಗೂ ಬಿಜೆಪಿಯ 18 ಶಾಸಕರು ಚರ್ಚೆ ಮಾಡಿದ್ದಾರೆ. ನಮ್ಮ ಸರ್ಕಾರದ ದಿಕ್ಸೂಚಿಯ ಬಗ್ಗೆ ರಾಜ್ಯಪಾಲರ ಭಾಷಣದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ನಮಗೆ ರೈತರ ಶ್ರೇಯೋಭಿವೃದ್ಧಿ ಮುಖ್ಯ. ಹಾಗಾಗಿ ಸರ್ಕಾರ ರೈತರ ಜತೆಗಿದೆ. ಯಾರೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಸ್ಪಷ್ಟವಾಗಿ ಮನವಿ ಮಾಡಿದ್ದೇವೆ. ಇಸ್ರೇಲ್ ಕೃಷಿ ತಂತ್ರಜ್ಞಾನದ ಬಗ್ಗೆ ಪ್ರಸ್ತಾಪಿಸಿದ್ದೇವೆ ಎಂದು ಹೇಳಿದರು.
ನನ್ನ ವಚನ ಭ್ರಷ್ಟತೆಯ ಬಗ್ಗೆ ಬಿಜೆಪಿ ಶಾಸಕ ಪಿ.ರಾಜೀವ್ ಅವರು ಚರ್ಚೆ ಮಾಡಿದ್ದಾರೆ. ಈ ಹಿಂದೆ ಒಂದು ಪ್ರಕರಣದಲ್ಲಿ ರಾಜೀವ್ ಅವರು ನನ್ನ ಜತೆ ಏನು ಮಾತುಕತೆ ನಡೆಸಿದರು. ನಂತರ ಹೇಗೆ ನಡೆದುಕೊಂಡರು ಎಂದು ನಾನು ಬಹಿರಂಗ ಮಾಡಲು ಹೋಗುವುದಿಲ್ಲ. ಎರಡನೇ ಬಾರಿ ಆಯ್ಕೆಯಾದ ಅವರೂ ಕೂಡ ನನ್ನ ವಚನಭ್ರಷ್ಟತೆಯ ಬಗ್ಗೆ ಮಾತನಾಡುತ್ತಾರೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ