ಬೆಂಗಳೂರು, ಜು.9- ನಾನು ಯಾವುದೇ ಒಂದು ಜಾತಿಗೆ ಸೀಮಿತವಾದ ಮುಖ್ಯಮಂತ್ರಿಯಲ್ಲ. ರಾಜ್ಯದ ಆರೂವರೆ ಕೋಟಿ ಜನರ ಪ್ರತಿನಿಧಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿ ತಿಳಿಸಿದರು.
ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವದ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಿದ ಅವರು, ತಮ್ಮನ್ನು ಒಂದು ಜಾತಿಗೆ ಸೀಮಿತಗೊಳಿಸಬೇಡಿ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎಂಬ ತಾರತಮ್ಯ ಮಾಡಿಲ್ಲ ಎಂದಾಗ, ಆಡಳಿತ ಪಕ್ಷದ ಸದಸ್ಯರು ಮೇಜುಕುಟ್ಟಿ ಸ್ವಾಗತಿಸಿದರು.
ಹಾಸನದ ಹೊರ ವರ್ತುಲ ರಸ್ತೆಗೆ 30 ಕೋಟಿ ನೀಡಿರುವುದನ್ನು ದೊಡ್ಡದಾಗಿ ಪ್ರಸ್ತಾಪ ಮಾಡಲಾಗಿದೆ. ಹಾಸನ ಶಾಸಕರು ಬಿಜೆಪಿಯವರು. ಅನುದಾನವನ್ನು ಹಾಸನಕ್ಕೆ ಬೇಡವೆಂದರೆ ಉತ್ತರ ಕರ್ನಾಟಕಕ್ಕೆ ಕೊಡೋಣ ಎಂದರು.
ಆಗ ಬಿಜೆಪಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಉತ್ತರ ಕರ್ನಾಟಕಕ್ಕೆ ನೀಡಿರುವ ಅನುದಾನದ ಬಗ್ಗೆ ಪ್ರಸ್ತಾಪಿಸಿ ಎಂದಾಗ, ಆಡಳಿತ ಪಕ್ಷದ ಸದಸ್ಯರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು.
ಉತ್ತರ ಮುಂದುವರೆಸಿದ ಸಿಎಂ, ಸ್ವಾತಂತ್ರ್ಯ ಬಂದ ನಂತರ ಈ ಕ್ಷಣದವರೆಗೆ ಯಾವ ಯಾವ ಭಾಗದಲ್ಲಿ ಅಭಿವೃದ್ಧಿಯಾಗಿದೆ. ಯಾವ ಯಾವ ಭಾಗಕ್ಕೆ ಅನ್ಯಾಯವಾಗಿದೆ ಎಂಬುದರ ಬಗ್ಗೆ ಒಂದೆರಡು ದಿನ ಇಲ್ಲವಾದರೆ ಒಂದು ವಾರದ ಕಾಲ ಕರ್ನಾಟಕದ ಸಮಗ್ರ ಚರ್ಚೆಯಾಗಲಿ. ಸಭಾಧ್ಯಕ್ಷರು ಇದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಉತ್ತರ ಕರ್ನಾಟಕದ ಮುಗ್ಧ ಜನರಿಗೆ ಏನು ಅನ್ಯಾಯವಾಗಿದೆ ಎಂಬುದು ಚರ್ಚೆಯಾಗಲಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿರುಗೇಟು ನೀಡಿದರು.
34 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡುವ ಘೋಷಣೆಯನ್ನು ಬಜೆಟ್ನಲ್ಲಿ ಮಾಡಿದ್ದು, ಆ ಸಾಲ ಮನ್ನಾ ಹಣ ರೈತರಿಗೆ ಹೋಗಬೇಕು ಎಂಬ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಮೊದಲ ಹಂತದಲ್ಲಿ ಇಷ್ಟು ದೊಡ್ಡ ಪ್ರಮಾಣದ ರೈತರ ಸಾಲ ಮನ್ನಾ ಮಾಡಿದರೂ ಕನಿಷ್ಠ ಯಾರಿಂದಲೂ ಒಳ್ಳೆ ಮಾತಿಲ್ಲ ಎಂದು ಸಿಎಂ ಬೇಸರ ವ್ಯಕ್ತಪಡಿಸಿದರು.
ಬದಲಾಗಿ ಸಾಲ ಮನ್ನಾ ಮಾಡಲು ಗಡುವು ನೀಡುವ, ವಚನ ಭ್ರಷ್ಟತೆ ಬಗ್ಗೆ ಚರ್ಚೆ ಮಾಡುವ, ಜು.12ರ ನಂತರ ಬೀದಿಗಿಳಿದು ಹೋರಾಟ ನಡೆಸುವುದಾಗಿ ಹೇಳಲಾಗಿದೆ ಎಂದು ಪರೋಕ್ಷವಾಗಿ ಬಿಜೆಪಿ ಶಾಸಕರನ್ನು ಕುಮಾರಸ್ವಾಮಿ ಟೀಕಿಸಿದರು.
ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಮೇಲ್ಮನೆಯಲ್ಲಿ ಹೇಳಿಕೆ ನೀಡುವಾಗ ಮತಕ್ಕಾಗಿ ಹಿತರೆ ಪಕ್ಷಗಳಂತೆ ನಾವು ಕೂಡ ರೈತರ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದೆವು. ಈಗ ಅದು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದರು ಎಂಬುದನ್ನು ಉಲ್ಲೇಖಸಿದರು.
ಹೇಳಿದ್ದು ನಿಜ:
ಸ್ವತಂತ್ರವಾಗಿ ಸರ್ಕಾರ ರಚಿಸುವ ಅವಕಾಶವನ್ನು ನಮ್ಮ ಪಕ್ಷಕ್ಕೆ ಕೊಟ್ಟಿದ್ದರೆ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಸಾಲ ಮನ್ನಾ ಮಾಡುವ ಮಾತಿಗೆ ಬದ್ಧವಾಗಿರುತ್ತಿದ್ದೆವು ಎಂದು ಕುಮಾರಸ್ವಾಮಿ ಹೇಳಿದರು.
ಚುನಾವಣಾ ಪೂರ್ವದಲ್ಲಿ ಈ ರೀತಿ ಭರವಸೆ ನೀಡಿದ್ದು ನಿಜ. ಆದರೆ, ನಮ್ಮ ಪಕ್ಷಕ್ಕೆ ಜನರು ಪೂರ್ಣ ಬಹುಮತ ನೀಡಿಲ್ಲ. ಇತಿಮಿತಿಯಲ್ಲಿ ಕೆಲಸ ಮಾಡುವ ಅನಿವಾರ್ಯತೆ ಇದೆ. ಅನ್ಯತಾ ಭಾವಿಸುವುದು ಬೇಡ. ಚುನಾವಣಾ ಪೂರ್ವದಲ್ಲಿ ನೀಡಿದ್ದ ಪ್ರಣಾಳಿಕೆಯನ್ನು ಜನರು ತಿರಸ್ಕರಿಸಿದ್ದಾರೆ. ಒಂದು ವೇಳೆ ಪ್ರಣಾಳಿಕೆ ಒಪ್ಪಿ ಜನರು ಮತ ನೀಡಿದ್ದರೆ. 113 ಶಾಸಕರು ನಮ್ಮ ಪಕ್ಷದಿಂದ ಚುನಾಯಿತರಾಗಬೇಕಿತ್ತು ಎಂದರು.