ಬೆಂಗಳೂರು, ಜು.9-ಮೂವತ್ತೈದು-ನಲವತ್ತು ವರ್ಷಗಳಲ್ಲಿ ಹಾಸನಕ್ಕೆ ಹೋಗಿರಲಿಲ್ಲ. ಇತ್ತೀಚೆಗೆ ಹೋಗಿದ್ದೆ. ಅಲ್ಲಿನ ಜನ ತುಂಬಾ ಒಳ್ಳೆಯವರು ಎಂದು ಡಿ.ಕೆ.ಶಿವಕುಮಾರ್ ವಿಧಾನಪರಿಷತ್‍ನಲ್ಲಿ ಗುಣಗಾನ ಮಾಡಿದರು.
ಪ್ರಶ್ನೋತ್ತರ ಕಲಾಪದಲ್ಲಿ ವಿಧಾನಪರಿಷತ್ ಸದಸ್ಯ ಗೋಪಾಲಸ್ವಾಮಿ ಅವರು, ನುಗ್ಗೇಹಳ್ಳಿ ಏತನೀರಾವರಿ ಯೋಜನೆಗಾಗಿ ಭೂಮಿ ಬಿಟ್ಟುಕೊಟ್ಟ ರೈತರಿಗೆ ಪರಿಹಾರ ಕೊಡಿಸುವ ಸಂಬಂಧ ಪ್ರಶ್ನೋತ್ತರ ಕಲಾಪದಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸುವ ಸಂದರ್ಭದಲ್ಲಿ ಹೀಗೆ ಮಾತನಾಡಿದ ಡಿ.ಕೆ.ಶಿವಕುಮಾರ್, 35-40 ವರ್ಷಗಳಿಂದ ಹಾಸನಕ್ಕೆ ಹೋಗಿರಲಿಲ್ಲ. ಈಗ ಹೋಗಿದ್ದೆ. ಅಲ್ಲಿನ ಜನ ತುಂಬಾ ಒಳ್ಳೆಯವರು ಎಂದಾಗ, ಸಂದೇಶ್ ನಾಗರಾಜ್ ಮತ್ತಿತರರು ಈಗ ಗೊತ್ತಾಯಿತೇ ನಿಮಗೆ ಎಂದು ಛೇಡಿಸಲು ಮುಂದಾದರು.
ಆಗ ಡಿ.ಕೆ.ಶಿವಕುಮಾರ್ ಅವರು, ಅದೆಲ್ಲ ಅಲ್ಲ, ರೀ… ನುಗ್ಗೇಹಳ್ಳಿ ಏತನೀರಾವರಿ ಯೋಜನೆ ಸಂಬಂಧ ಸಭೆ ಮಾಡಲು ಹೋಗಿದ್ದೆ. ಅಲ್ಲಿನ ರೈತರು ಬಹಳ ಒಳ್ಳೆಯ ಜನ. ಯೋಜನೆ ಪೂರ್ಣಗೊಳ್ಳಬೇಕೆಂಬ ಹಿನ್ನೆಲೆಯಲ್ಲಿ ಉಚಿತವಾಗಿ ಭೂಮಿ ಕೊಟ್ಟಿದ್ದಾರೆ. ಗುತ್ತಿಗೆದಾರರಿಂದ ಕೇವಲ ಗುಡ್‍ವಿಲ್ ಹಣ ಪಡೆದಿರುವುದು ಬಿಟ್ಟರೆ, ಯಾವ ರೀತಿಯ ಹಣವನ್ನು ಪಡೆದಿಲ್ಲ ಎಂದರು.
ಈ ಯೋಜನೆ ಸಂಬಂಧ ಈ ಹಿಂದೆ ಒಂದು ಸಭೆ ಆಗಿದೆ. ಜಮೀನು ಖರೀದಿ ಬಗ್ಗೆ 11(ಇ) ಸ್ಕೆಚ್ ಆಗಬೇಕಿದೆ. ನಂತರ ಹೆಚ್ಚಿನ ಪರಿಹಾರ ಕೊಡಿಸುವುದಾಗಿ ಸಚಿವರು ಭರವಸೆ ನೀಡಿದರು.