ಕಾಂಗ್ರೆಸ್‍ಗೆ ಇನ್ನಿಬ್ಬರು ಕಾರ್ಯಾಧ್ಯಕ್ಷರು

 

ಬೆಂಗಳೂರು, ಜು.9-ರಾಜ್ಯದಲ್ಲಿ ಕಾಂಗ್ರೆಸ್‍ನ್ನು ಮುಂದಿನ ಲೋಕಸಭೆ ಚುನಾವಣೆ ವೇಳೆಗೆ ಮತ್ತಷ್ಟು ಸದೃಢಗೊಳಿಸುವ ಹಿನ್ನೆಲೆಯಲ್ಲಿ ಸಂಘಟನೆಗೆ ಅಗತ್ಯವಾದ ಹೆಜ್ಜೆಗಳನ್ನಿಡಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ಕೆಪಿಸಿಸಿಗೆ ಇನ್ನಿಬ್ಬರು ಕಾರ್ಯಾಧ್ಯಕ್ಷರನ್ನು ನೇಮಿಸಲು ಹೈಕಮಾಂಡ್ ಚಿಂತನೆ ನಡೆಸಿದೆ.
ಕೆಪಿಸಿಸಿಗೆ ನೂತನ ಅಧ್ಯಕ್ಷರಾಗಿ ಇತ್ತೀಚೆಗಷ್ಟೇ ದಿನೇಶ್‍ಗುಂಡೂರಾವ್ ಹಾಗೂ ಕಾರ್ಯಾಧ್ಯಕ್ಷರನ್ನಾಗಿ ಈಶ್ವರ್ ಖಂಡ್ರೆ ಅವರನ್ನು ನೇಮಿಸಲಾಗಿತ್ತು. ಆದರೆ ಈ ಬಗ್ಗೆ ಸಂಸದರ ಅಸಮಾಧಾನ, ಸಂಘಟನೆಯ ಸಾಮಥ್ರ್ಯವಿಲ್ಲ ಎಂಬ ಮಾತುಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ರಾಜ್ಯದ ಹಳೇ ಮೈಸೂರು ಹಾಗೂ ಕರಾವಳಿ ಭಾಗದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಲು ಅನುಕೂಲವಾಗುವಂತೆ ಇಬ್ಬರು ಕಾರ್ಯಾಧ್ಯಕ್ಷರನ್ನು ನೇಮಿಸಲು ಉದ್ದೇಶಿಸಲಾಗಿದೆ.
ದಿನೇಶ್ ಗುಂಡೂರಾವ್ ಸಾರ್ವತ್ರಿಕ ನಾಯಕರಲ್ಲ. ಒಟ್ಟಾಗಿ ಎಲ್ಲರನ್ನು ಕರೆದುಕೊಂಡು ಹೋಗಲು ಮಾತ್ರ ಸಾಧ್ಯ. ಆದರೆ ಸಂಘಟನೆಯ ಚಾತುರ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರಲ್ಲಿ ಆಯ್ಕೆ ತಪ್ಪು ಎಂಬ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ನೇಮಕವಾಗಿರುವ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಉತ್ತರ ಕರ್ನಾಟಕ ಭಾಗವನ್ನು ಪ್ರತಿನಿಧಿಸಿ ಅಲ್ಲಿನ ಕಾರ್ಯಚಟುವಟಿಕೆಗಳನ್ನು ನಡೆಸಲು ಹಾಗೂ ಸಂಘಟನೆ ಮತ್ತಿತರ ಪಕ್ಷದ ಕಾರ್ಯಗಳನ್ನು ನಿರ್ವಹಿಸಲು ಸೂಕ್ತರಾಗಿದ್ದು, ರಾಜ್ಯದ ಇತರೆ ಪ್ರಮುಖ ಭಾಗಗಳಾದ ಹಳೇ ಮೈಸೂರು ಹಾಗೂ ಕರಾವಳಿ ಭಾಗಗಳಿಗೆ ಇನ್ನಿಬ್ಬರು ಕಾರ್ಯಾಧ್ಯಕ್ಷರನ್ನು ನೇಮಿಸಲು ಪಕ್ಷದ ವರಿಷ್ಠರು ಮುಂದಾಗಿದ್ದಾರೆ.
ಈ ಹಿಂದೆ ಉತ್ತರ ಕರ್ನಾಟಕ ಭಾಗಕ್ಕೆ ಎಸ್.ಆರ್.ಪಾಟೀಲ್ ಅವರನ್ನು ಹಾಗೂ ಹಳೇ ಮೈಸೂರು ಭಾಗಕ್ಕೆ ದಿನೇಶ್‍ಗುಂಡೂರಾವ್ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿತ್ತು. ನಂತರ ಬೆಳವಣಿಗೆಗಳಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಎಸ್.ಆರ್.ಪಾಟೀಲ್ ಅವರು ರಾಜೀನಾಮೆ ನೀಡಿದ್ದರು. ಕೆಪಿಸಿಸಿಗೆ ದಿನೇಶ್‍ಗುಂಡೂರಾವ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಇದೀಗ ಮತ್ತೆ ಹಳೇ ಮೈಸೂರು ಭಾಗ ಹಾಗೂ ಕರಾವಳಿಯಲ್ಲಿ ಪಕ್ಷವನ್ನು ಮುನ್ನಡೆಸಲು ಸೂಕ್ತ ನಾಯಕರ ಕೊರತೆ ಎದ್ದು ಕಾಣುತ್ತಿದೆ.
ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅದರಲ್ಲೂ ಕರಾವಳಿ ಭಾಗದಲ್ಲಿರುವ ಬಿಜೆಪಿ ಹಾಗೂ ಸಂಘ ಪರಿವಾರದ ಪ್ರಾಬಲ್ಯವನ್ನು ಮೆಟ್ಟಿ ನಿಂತು ಪಕ್ಷ ಸಂಘಟನೆ ಸೇರಿದಂತೆ ಪಕ್ಷವನ್ನು ಒಗ್ಗಟ್ಟಾಗಿ ತೆಗೆದುಕೊಂಡು ಹೋಗಲು ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡುವ ಅನಿವಾರ್ಯತೆ ಇದೆ. 2008ರಲ್ಲಿ ಕರಾವಳಿ ಭಾಗದಲ್ಲಿ ಉತ್ತಮ ಫಲಿತಾಂಶ ಪಡೆದಿದ್ದ ಕಾಂಗ್ರೆಸ್ ನಂತರದ ದಿನಗಳಲ್ಲಿ ಸಂಘಟನೆ ಕೊರತೆಯಂತಹ ಕಾರಣಗಳಿಂದಾಗಿ ಕಾಂಗ್ರೆಸ್‍ನ ಪ್ರಾಬಲ್ಯಕ್ಕೆ ತೊಡಕುಂಟಾಗಿತ್ತು.
ಹಿಂದುಳಿದ, ದಲಿತ ಅಥವಾ ಒಕ್ಕಲಿಗರೊಬ್ಬರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಬೇಕೆಂಬ ಒತ್ತಾಯ ಕೇಳಿಬಂದಿದೆ. ಪ್ರಸ್ತುತ ದಿನೇಶ್ ಗುಂಡೂರಾವ್ ಅವರು ಅಧ್ಯಕ್ಷರಾಗಿದ್ದು, ಉತ್ತರ ಕರ್ನಾಟಕ ಭಾಗದ ಈಶ್ವರಖಂಡ್ರೆ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಅದೇ ರೀತಿ ಹಿಂದುಳಿದವರೊಬ್ಬರು ಮತ್ತು ದಲಿತರೊಬ್ಬರು ಸೇರಿದಂತೆ ಇಬ್ಬರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಬೇಕೆಂದು ಹಿರಿಯ ಕಾಂಗ್ರೆಸಿಗರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರ ಮೇಲೆ ಒತ್ತಡ ತಂದಿದ್ದು, ಅವರು ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಇದೇ ಜು.11ರಂದು ದಿನೇಶ್ ಗುಂಡೂರಾವ್ ಅವರ ಅಧಿಕಾರ ಸ್ವೀಕಾರ ಸಮಾರಂಭವಿದ್ದು, ಇದರ ನಂತರ ಕೆಪಿಸಿಸಿಗೆ ಇಬ್ಬರು ಕಾರ್ಯಾಧ್ಯಕ್ಷರು ಹಾಗೂ ಇನ್ನಿತರೆ ಖಾಲಿ ಇರುವ ಹುದ್ದೆಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲು ನಿರ್ಧರಿಸಲಾಗಿದ್ದು, ಈ ಸಂಬಂಧ ದಿನೇಶ್ ಗುಂಡೂರಾವ್ ಅವರು ಹೈಕಮಾಂಡ್ ವರಿಷ್ಠರ ಜತೆ ಚರ್ಚೆ ನಡೆಸುವ ಸಾಧ್ಯತೆ ಇದೆ.
ಬಿಜೆಪಿ ಪಕ್ಷ ಲೋಕಸಭೆ ಚುನಾವಣೆಗೆ ಈಗಾಗಲೇ ಭಾರೀ ಸಿದ್ಧತೆ ನಡೆಸಿದೆ. ಇದಕ್ಕೆ ಪ್ರತಿತಂತ್ರವಾಗಿ ಕಾಂಗ್ರೆಸ್ ಪಕ್ಷ ಕೂಡ ಭರ್ಜರಿ ಸಿದ್ಧತೆಗಳನ್ನು ನಡೆಸಬೇಕಿದೆ.
ದಿನೇಶ್ ಗುಂಡೂರಾವ್ ಅವರು ಕೂಡ ಪಕ್ಷವನ್ನು ಸಜ್ಜುಗೊಳಿಸಿಕೊಂಡು ಚುನಾವಣೆಗೆ ತಯಾರಾಗಬೇಕಿದೆ. ಅದಕ್ಕಾಗಿ ಹೈಕಮಾಂಡ್ ಇವರಿಗೆ ಜಾತಿ ಪ್ರಾತಿನಿಧ್ಯ, ಭೌಗೋಳಿಕ ಆದ್ಯತೆ ಮೇಲೆ ಹೊಸ ಪಡೆಯನ್ನು ನೀಡುವ ಸಾಧ್ಯತೆ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ