150 ಕೋಟಿ ಲಂಚ ಪಡೆದಿದ್ದರೆ ಸಿಎಂ ಆಗಿ ಮುಂದುವರೆಸಿದ್ದೇಕೆ

 

ಬೆಂಗಳೂರು, ಜು.9- ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ತಾವು ಮುಖ್ಯಮಂತ್ರಿಯಾದ ಎರಡು ತಿಂಗಳಲ್ಲೇ 150ಕೋಟಿ ರೂ. ಹಗರಣದ ಆರೋಪ ಹೊರಿಸಲಾಯಿತು. ಆದರೂ ಮುಂದಿನ 18 ತಿಂಗಳು ತಮ್ಮನ್ನು ಏಕೆ ಮುಂದುವರೆಸಿದಿರಿ ಎಂದು ಬಿಜೆಪಿ ಶಾಸಕರನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿಂದು ಪ್ರಶ್ನಿಸಿದರು.
ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವದ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಿದ ಅವರು, ಗಣಿ ಮಾಲೀಕರಿಂದ 150 ಕೋಟಿ ರೂ. ಪಡೆಯಲಾಗಿದೆ ಎಂಬ ಆರೋಪ ಹೊರಿಸಿದಾಗಲೂ ಕೂಡ ತಾವು ರಕ್ಷಣೆ ಕೋರಲಿಲ್ಲ. ಅಂದು ಏಕಾಂಗಿಯಾಗಿ ಎದುರಿಸುವುದಾಗಿ ಇದೇ ಸದನದಲ್ಲಿ ಹೇಳಿದ್ದೆ. ಜಿಲ್ಲಾಧಿಕಾರಿ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳ ವರ್ಗಾವಣೆ ಮಾಡಿದ್ದರಿಂದ ಆ ಆರೋಪ ಹೊರಿಸಲಾಯಿತು. ಅಲ್ಲದೆ, ಸಂಪುಟದ ಸಚಿವರೊಬ್ಬರು ತಮ್ಮ ಕೊಲೆಗೆ ಮುಖ್ಯಮಂತ್ರಿ ಸುಪಾರಿ ಕೊಟ್ಟಿದ್ದಾರೆ ಎಂಬ ಆರೋಪ ಹೊರಿಸಿದ್ದರು. ಎಲ್ಲವನ್ನೂ ಕೂಡ ಸಹಿಸಿಕೊಂಡೆ. ಸಮ್ಮಿಶ್ರ ಸರ್ಕಾರ ರಚನೆಯಾಗುವಾಗ ದೆಹಲಿಯಿಂದ ಬಿಜೆಪಿ ನಾಯಕರು ಬರಲಿಲ್ಲ. ಆದರೆ, ಅಧಿಕಾರ ಬಿಡುವಾಗ ಬಂದರು ಎಂದು ಹಿಂದಿನ ಘಟನೆಗಳನ್ನು ಕುಮಾರಸ್ವಾಮಿ ಮೆಲುಕು ಹಾಕಿದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷ ರಮೇಶ್‍ಕುಮಾರ್, ಡಿವೊರ್ಸ್ ಆದ ಮೇಲೆ ಮುಗಿಯಿತು. ಈಗ ಚರ್ಚೆ ಬೇಡ ಎಂದು ಹೇಳುವ ಮೂಲಕ ತೆರೆ ಎಳೆಯುವ ಪ್ರಯತ್ನ ಮಾಡಿದರು.
ಚುನಾವಣೆ ಸಂದರ್ಭದಲ್ಲಿ ಪರಸ್ಪರ ಟೀಕೆ ಹಾಗೂ ವಿಷಯಗಳ ಆಧಾರದ ಮೇಲೆ ಚರ್ಚೆ ಮಾಡುತ್ತೇವೆ. ಕೆಜಿಪಿ, ಬಿಜೆಪಿ ಇದ್ದಾಗ ಇದೇ ರೀತಿ ಪರಸ್ಪರ ಟೀಕೆ ಮಾಡಲಾಗಿತ್ತು. ಆಗ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಡಿ.ವಿ.ಸದಾನಂದಗೌಡರನ್ನು ಲೂಟಿ ಮಾಡಿದ್ದಾರೆ ಎಂದು ಟೀಕಿಸಿದ್ದರೆ, ಭ್ರಷ್ಟಾಚಾರ ಬೆಳೆಯಲು ಯಡಿಯೂರಪ್ಪರವರೇ ಕಾರಣ ಎಂದು ಸದಾನಂದಗೌಡರು ಟೀಕಿಸಿದ್ದರು. ಯಡಿಯೂರಪ್ಪನವರು ಹತಾಶರಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದು ಶಾಸಕ ಸಿ.ಟಿ.ರವಿ ಹೇಳಿದ್ದರು. ಈಗ ಕೆಜೆಪಿ, ಬಿಜೆಪಿ ಒಂದಾಗಿಲ್ಲವೆ. ಇದು ಯಾವ ಮೈತ್ರಿ. ಕಾಂಗ್ರೆಸ್- ಜೆಡಿಎಸ್‍ಅನ್ನು ಅಪವಿತ್ರ ಮೈತ್ರಿ ಎಂದು ಟೀಕಿಸುತ್ತೀರಿ ಎಂದರು.
ಆಗ ಮಧ್ಯ ಪ್ರವೇಶಿಸಿದ ಸಹಕಾರ ಸಚಿವ ಬಂಡೆಪ್ಪ ಕಾಶಂಪುರ್ ಮಾತನಾಡಿ, ಸಾಯುವವರೆಗೂ ಬಿಜೆಪಿಗೆ ಹೋಗುವುದಿಲ್ಲ ಎಂದು ಯಡಿಯೂರಪ್ಪ ಹೇಳಿದ್ದರು. ಈಗ ಬಿಜೆಪಿಯಲಿಲ್ಲವೇ ಎಂದು ಛೇಡಿಸಿದರು.
ಮಾತು ಮುಂದುವರೆಸಿದ ಮುಖ್ಯಮಂತ್ರಿಗಳು, ರೈತರಿಗೆ ನೀಡುವ ಉಚಿತ ವಿದ್ಯುತ್ 16,500 ಕೋಟಿ ಬಾಕಿಯನ್ನು ಸರ್ಕಾರ ಉಳಿಸಿಕೊಂಡಿದೆ ಎಂದು ಆರೋಪಿಸಲಾಗಿದೆ. ಇದು ಕಳೆದ 10 ವರ್ಷಗಳಿಂದಲೂ ಉಳಿದುಕೊಂಡು ಬಂದಿದೆ. ಸಮ್ಮಿಶ್ರ ಸರ್ಕಾರ ಬಂದು ಒಂದೂವರೆ ತಿಂಗಳು ಕಳೆದಿಲ್ಲ. ಆದರೂ ಟೀಕಾ ಪ್ರಹಾರ ಮಾಡಲಾಗುತ್ತಿದೆ. ಇನ್ನೂ ಟೇಕಾಪ್ ಆಗಿಲ್ಲ ಎಂದೇ ಮಾತನಾಡುತ್ತಿದ್ದಾರೆ. 2018ರಲ್ಲಿ ಬಿಜೆಪಿಗೆ ಪೂರ್ಣ ಬಹುಮತದ ಸರ್ಕಾರವಿದ್ದರೂ ರೆಸಾರ್ಟ್‍ನಲ್ಲಿ ಶಾಸಕರು 200 ಕೋಟಿಗೆ ಹರಾಜಾದರು. 40ಕ್ಕೂ ಹೆಚ್ಚು ಶಾಸಕರ ಬಂಡಾಯ, ನಾಯಕತ್ವ ಬದಲಾವಣೆಗೆ ಪಟ್ಟು ಎಂಬಂತಹ ಘಟನೆಗಳು ನಡೆದವು.
ಐದು ವರ್ಷದಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಿಕೊಂಡಿರಿ. ನಾವು ಬದಲಾವಣೆ ಮಾಡಿಕೊಳ್ಳಲು ಹೇಳಿದ್ದ್ದವೆ ಎಂದು ಸಿಎಂ ಬಿಜೆಪಿ ಶಾಸಕರನ್ನು ಪ್ರಶ್ನಿಸಿದರು.
ಸಹಕಾರಿ ಬ್ಯಾಂಕ್ ಒಂದರ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರೇ ನನ್ನ ಕುರ್ಚಿ ಅಲುಗಾಡುತ್ತಿದೆ. ನಮ್ಮ ಸಮಾಜ ನಮ್ಮ ಬೆಂಬಲಕ್ಕೆ ನಿಲ್ಲಬೇಕು ಎಂಬ ರೀತಿಯಲ್ಲಿ ಮಾತನಾಡಿದ್ದನ್ನು ಕುಮಾರಸ್ವಾಮಿ ಉಲ್ಲೇಖಿಸಿದರು.
ನಮ್ಮ ತಾಯಿಯನ್ನು ರಾಜಕೀಯಕ್ಕೆ ತರಬೇಡಿ. ಹಳ್ಳಿಯ ಹೆಣ್ಣು ಮಗಳು ರಾಜಕೀಯ ವಿಚಾರಕ್ಕೆ ಬಂದವರಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಸಿಎಂ ಆಗುವುದಿಲ್ಲ ಎಂದು ಹೇಳಿದ್ದಾರೆ. ನೀವು ಕ್ಷಮಿಸುತ್ತೀರಾ ಎಂದು ಮಾಧ್ಯಮದವರು ಕೇಳಿದಾಗ ಕ್ಷಮಿಸಲು ನಾನ್ಯಾರು ಎಂದು ಹೇಳಿದ್ದಾರೆ. ಅದನ್ನೇ ಮಾಧ್ಯಮದವರು ತಿರುಚಿದ್ದಾರೆ ಎಂದರು.
ಆಗ ಮಧ್ಯ ಪ್ರವೇಶಿಸಿದ ಕೆ.ಎಸ್.ಈಶ್ವಪ್ಪ, ನಿಮ್ಮ ತಾಯಿ ನಮಗೂ ತಾಯಿಯೇ. ನೋವಿನಿಂದ ಹೇಳಿದ್ದಾರೆ. ನಾನೂ ರಾಜಕಾರಣಕ್ಕೆ ಬಳಸಿಲ್ಲ. ಮಾಧ್ಯಮದವರೂ ತಿರುಚಿಲ್ಲ. ಇದನ್ನು ನೀವು ತಿರುಚಬೇಡಿ ಎಂದು ತೆರೆ ಎಳೆದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ