ಔಷಧಿಯಲ್ಲಿ ಹುಳು ಸಿಬ್ಬಂದಿ ವಜಾ

ವಿಜಯಪುರ, ಜು.7-ರೋಗಿಗಳಿಗೆ ಹುಳು ತುಂಬಿದ ಔಷಧಿ (ಸಲೈನ್) ಹಾಕಿ ಚಿಕಿತ್ಸೆ ನೀಡಿದ ಇಬ್ಬರು ಆಸ್ಪತ್ರೆ ಸಿಬ್ಬಂದಿಯನ್ನು ವಜಾ ಮಾಡಲಾಗಿದ್ದು, ಮತ್ತಿಬ್ಬರನ್ನು ಅಮಾನತುಗೊಳಿಸಲಾಗಿದೆ. ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹೋರ್ತಿ ಸರ್ಕಾರಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾ.ಕೋರಿ ಹಾಗೂ ನರ್ಸ್ ನಂದಕಲಾಲ್ ಅವರನ್ನು ವಜಾಗೊಳಿಸಲಾಗಿದ್ದು, ಇನ್ನಿಬ್ಬರು ಸಿಬ್ಬಂದಿಗಳಾದ ಪುಂಡಲೀಕ ಲಗಳಿ ಮತ್ತು ಸುರೇಶ್ ಜಾಧವ್ ಅವರನ್ನು ಅಮಾನತು ಮಾಡಿ ವಿಜಯಪುರ ಡಿಎಚ್‍ಒ ಡಾ.ರಾಜ್‍ಕುಮಾರ್ ಎರಗಲ್ ಆದೇಶ ಹೊರಡಿಸಿದ್ದಾರೆ. ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಯ ಬೇಜವಾಬ್ದಾರಿ ಈ ಕ್ರಮದಿಂದ ಸಾರ್ವಜನಿಕರು ತೀವ್ರ ಆಕ್ರೋಶಗೊಂಡಿದ್ದಾರೆ. ಹಡಗಲ ಗ್ರಾಮದ ನಿವಾಸಿ ನಿರ್ಮಲ ವಾಲಿಕರ್ ಎಂಬುವರು ತಮ್ಮ ಕೈಗಾದ ಗಾಯಕ್ಕೆ ಔಷಧಿ ಹಾಕುವಾಗ ಈ ಘಟನೆ ಬೆಳಕಿಗೆ ಬಂದಿತ್ತು. ಹುಳುಗಳು ತುಂಬಿದ್ದ ಸಲೈನ್ ಬಾಟಲಿಯಿಂದ ಈ ಸಿಬ್ಬಂದಿ ಚಿಕಿತ್ಸೆ ನೀಡಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಗಾಯಾಳು ಸಂಬಂಧಿಗಳು ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೂ ಕಾರಣವಾಗಿತ್ತು.
ಆರೋಗ್ಯ ಸಚಿವರಾದ ಶಿವಾನಂದ ಪಾಟೀಲರ ತವರು ಜಿಲ್ಲೆಯಲ್ಲಿ ಈ ಅಧ್ವಾನಗಳು ನಡೆದಿರುವುದು ತೀವ್ರ ಮುಜುಗರ ಉಂಟು ಮಾಡಿತ್ತು. ಅಕ್ಕಿ, ಬೇಳೆಕಾಳುಗಳಿಗೆ ಹುಳು ಬೀಳುವುದನ್ನು ಕೇಳಿದ್ದೇವೆ. ಆದರೆ ಈ ಪ್ರಕರಣದಲ್ಲಿ ಔಷಧಿ ಬಾಟಲಿಯಲ್ಲಿ ಹುಳು ಬಿದ್ದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಇಂತಹ ಔಷಧಿಯಿಂದ ರೋಗಿಗೆ ಚಿಕಿತ್ಸೆ ನೀಡಿರುವುದು ಆಸ್ಪತ್ರೆಯ ಸಿಬ್ಬಂದಿಯ ಬೇಜವಾಬ್ದಾರಿಗೆ ನಿದರ್ಶನವಾಗಿದೆ. ಸದ್ಯ ಇಂತಹ ಸಿಬ್ಬಂದಿಯನ್ನು ವಜಾ ಮಾಡಿ ಸರ್ಕಾರವೇನೋ ಮುಜುಗರದಿಂದ ಪಾರಾಗಿದೆ. ಆದರೆ ಸರ್ಕಾರಿ ಆಸ್ಪತ್ರೆಗಳ ಇಂತಹ ಅವಾಂತರಗಳಿಗೆ ಕೊನೆ ಎಂದು ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ