ಸ್ವಚ್ಛತೆ ಕಾಪಾಡಲು ಜನರಿಗೆ ಅಧ್ಯಕ್ಷರ ಮನವಿ

ಬೇಲೂರು, ಜು.5- ಪುರಸಭೆ ವ್ಯಾಪ್ತಿಯ ನಾಗರೀಕರು ತಮ್ಮ ಮನೆಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಂಡು ಆರೋಗ್ಯವಾಗಿರ ಬೇಕು ಎಂದು ಪುರಸಭೆ ಅಧ್ಯಕ್ಷೆ ಭಾರತಿ ಅರುಣ್‍ಕುಮಾರ್ ಹೇಳಿದರು. ಪಟ್ಟಣದ 23ನೇ ವಾರ್ಡಿನಲ್ಲಿ ಸ್ವಚ್ಛತೆ ಪರಿಶೀಲಿಸಿ ಮಾತನಾಡಿದ ಅವರು, ಸ್ವಚ್ಛತೆ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಪರಿಶೀಲಿಸಲಾಗುತ್ತಿದೆ. ಈಗಾಗಲೆ 23 ವಾರ್ಡ್‍ಗಳಿಗೂ ಅಧಿಕಾರಿಗಳು ಹಾಗೂ ನಾನು ಭೇಟಿ ನೀಡಿ ಪರಿಶೀಲಿಸುತ್ತಿದ್ದೇವೆ. ನಾಗರಿಕರು ತಮ್ಮ ಮನೆಗಳ ಸುತ್ತಮುತ್ತ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು. ಕಸ ಕಡ್ಡಿಗಳನ್ನು ಚರಂಡಿಗಳಲ್ಲಿ ಹಾಗೂ ಎಲ್ಲೆಂದರಲ್ಲಿ ಹಾಕುವುದರಿಂದ ನೀರು ನಿಂತು ಸೊಳ್ಳೆಗಳ ತಾಣವಾಗಿ ಖಾಯಿಲೆಗಳು ಹರಡಲು ಕಾರಣವಾತ್ತಿದೆ ಎಂದು ಮನವಿ ಮಾಡಿದರು.
ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಮಾತನಾಡಿ, ನಾಗರಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಸಿಬ್ಬಂದಿಗಳು ದಿನನಿತ್ಯ ಪ್ರತಿಯೊಂದು ವಾರ್ಡ್‍ಗಳಲ್ಲೂ ಸ್ವಚ್ಛತೆಯಲ್ಲಿ ತೊಡಗುತ್ತಾರೆ. ಆದರೆ ಮತ್ತೆ ಕಸ ಕಡ್ಡಿಗಳನ್ನು ರಸ್ತೆ ಮತ್ತು ಚರಂಡಿಗಳಲ್ಲಿ ಹಾಕುತ್ತಿರುವುದರಿಂದ ಅನೈರ್ಮಲ್ಯಕ್ಕೆ ಕಾರಣವಾಗುತ್ತಿದೆ ಎಂದು ಬೇಸರಪಟ್ಟರು. ಪಟ್ಟಣದ ನಾಗರಿಕರು ಮನೆ ಹಾಗೂ ನೀರಿನ ತೆರಿಗೆಯನ್ನು ಸಕಾಲಕ್ಕೆ ಕಟ್ಟಿ ಪುರಸಭೆಯ ಅಭಿವೃದ್ದಿಕೆಲಸಗಳಿಗೆ ಸಹಕಾರ ನೀಡಬೇಕು ಎಂದರು. ಆರೋಗ್ಯಾಧಿಕಾರಿ ಮಧುಸೂದನ್, ಸಿಬ್ಬಂದಿಗಳಾದ ಶಂಕರ್, ಸಲ್ಮಾನ್, ಕರಿಯಪ್ಪ, ರಮೇಶ್ ಇನ್ನಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ