ಮೀಸಲಾತಿ ಪ್ರಮಾಣವನ್ನು ಶೇ.50 ರಿಂದ ಶೇ.70ಕ್ಕೆ ಹೆಚ್ಚಿಸಬೇಕು – ಕೆ.ಸಿ. ಪುಟ್ಟಸಿದ್ದಶೆಟ್ಟಿ

ಹುಣಸೂರು, ಜು.5-ಮೀಸಲಾತಿ ಪ್ರಮಾಣವನ್ನು ಶೇ.50 ರಿಂದ ಶೇ.70ಕ್ಕೆ ಹೆಚ್ಚಿಸಬೇಕೆಂದು ಕಾಯಕ ಸಮುದಾಯದ ಜಿಲ್ಲಾಧ್ಯಕ್ಷ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ಕೆ.ಸಿ. ಪುಟ್ಟಸಿದ್ದಶೆಟ್ಟಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರವರು ಹಿಂದುಳಿದ ವರ್ಗಗಳಿಗೆ ಹಾಗೂ ಪರಿಶಿಷ್ಟ ವರ್ಗದ ಕೆಲ ಪಂಗಡಗಳಿಗಾಗಿ ಒಳಮೀಸಲಾತಿಯನ್ನು ಪ್ರತಿಪಾದಿಸಿದರು. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮೀಸಲಾತಿ ಪ್ರಮಾಣವನ್ನು ಶೇ.50 ರಿಂದ 70ಕ್ಕೆ ಏರಿಸಲು ತೀರ್ಮಾನಿಸಿದರು. ಈಗಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿರವರು ಈ ಎರಡೂ ನಿರ್ಣಯಗಳನ್ನು ಶೀಘ್ರದಲ್ಲಿ ಜಾರಿಗೊಳಿಸಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ರಾಜ್ಯದಲ್ಲಿ ಪ್ರ.ವರ್ಗ-2 ಅಡಿಯಲ್ಲಿ 380 ಉಪಜಾತಿಗಳು, ಪ್ರ.ವರ್ಗ-1 ರ ಅಡಿಯಲ್ಲಿ 376 ಉಪಜಾತಿಗಳು, ಪ್ರ.ವರ್ಗ-2ಬಿ ಅಡಿಯಲ್ಲಿ ಮುಸ್ಲಿಂ ಸಮುದಾಯದ, ಪ.ಜಾತಿಯಲ್ಲಿ 179 ಉಪಜಾತಿಗಳು, ಪ. ಪಂಗಡದಲ್ಲಿ 105 ಉಪಜಾತಿಗಳು ಇವೆ. ಈ ಪೈಕಿ 757 ತಳ ಸಮುದಾಯಗಳ ಸ್ಥಿತಿ ಇಂದಿಗೂ ದಯನೀಯವಾಗಿದೆ. ತಾಲ್ಲೂಕಿನಲ್ಲಿ ಒಕ್ಕೂಟ ಸ್ಥಾಪನೆಯಾಗಿದೆ. (15 ತಳ ಸಮುದಾಯಗಳಿಂದ 83 ಸಾವಿರಕ್ಕೂ ಹೆಚ್ಚು ಮತದಾರರಿದ್ದು, ಇವರೆಲ್ಲರೂ ಒಂದುಗೂಡಿದರೆ ಈ ಮತಗಳೆ ನಿರ್ಣಾಯಕವಾಗುತ್ತವೆ. ಹುಣಸೂರು ತಾಲ್ಲೂಕು ಜಾತ್ಯಾತೀತ ತತ್ವಗಳ ಆಚರಣೆಯಲ್ಲಿ ಮೊದಲ ಸ್ಥಾನ ಗಳಿಸಿದೆ. ಈ ನಿಟ್ಟಿನಲ್ಲಿ ಎಲ್ಲಾ ಸಮುದಾಯಗಳನ್ನು ಒಂದೇ ಸೂರಿನಡಿಯಲ್ಲಿ ತಂದು ಸಾಮೂಹಿಕ ನಾಯಕತ್ವದೊಂದಿಗೆ ಹೋರಾಟ ನಡೆಸಲಾಗುವುದು. ಮುಂಬರುವ ದಿನಗಳಲ್ಲಿ ಒಕ್ಕೂಟದ ಪದಾಧಿಕಾರಿಗಳನ್ನು ನೇಮಿಸಲಾಗುವುದು ಎಂದರು. ಯಾವುದೇ ರಾಜಕೀಯ ಅಧಿಕಾರವಾಗಲಿ, ಶೈಕ್ಷಣಿಕ ಮತ್ತು ಆರ್ಥಿಕ ಪ್ರಗತಿಯಾಗಲಿ ಸಾಧ್ಯವಾಗುತ್ತಿಲ್ಲ ಎಂದರು. ಕಾಯಕ ಸಮುದಾಯಗಳ ಎಲ್ಲಾ ಸಣ್ಣಪುಟ್ಟ ಸಮುದಾಯಗಳನ್ನು ಒಗ್ಗೂಡಿಸಿ ಒಕ್ಕೂಟ ಸ್ಥಾಪಿಸಿದ್ದು, ಈ ಸಮುದಾಯಗಳು ಪಡೆಯಬೇಕಾದ ಸೌಲಭ್ಯಗಳಿಗಾಗಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದರು. ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬೋರಪ್ಪಶೆಟ್ಟಿ, ಸಂಘಟನಾ ಕಾರ್ಯದರ್ಶಿ ಪುಟ್ಟಣ್ಣಚಾರ್, ನೂತನವಾಗಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ರೇವಣ್ಣರನ್ನು ಆಯ್ಕೆ ಮಾಡಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ