
ಹುಣಸೂರು, ಜು.5- ಲಂಚ ಸ್ವೀಕರಿಸುತ್ತಿದ್ದ ರಾಜಸ್ವ ನಿರೀಕ್ಷಕನೊಬ್ಬ ಎಸಿಬಿ ಬಲೆಗೆ ಬಿದ್ದಿದ್ದಾನೆ.
ಹುಣಸೂರು ತಾಲ್ಲೂಕಿನ ಗಾವಡಗೆರೆಯ ರಾಜಸ್ವ ನಿರೀಕ್ಷಕ ವಿಷಕಂಠನಾಯಕ ಲಂಚ ಸ್ವೀಕರಿಸುವ ವೇಳೆ ಎಸಿಬಿ ಬೀಸಿದ್ದ ಬಲೆಗೆ ಸಿಲುಕಿಕೊಂಡಿದ್ದಾನೆ.
ಇವರು ಅತಿಕುಪ್ಪೆಯ ನಿವಾಸಿ ಭರತ್ಕುಮಾರ್ ಎಂಬುವವರಿಗೆ 0-10 ಗುಂಟೆ ಜಮೀನಿನ ಖಾತೆ ಬದಲಾವಣೆ ಮಾಡಿಕೊಡಲು 10 ಸಾವಿರ ರೂಪಾಯಿಗಳನ್ನು ನೀಡುವಂತೆ ಒತ್ತಾಯಿಸಿದ್ದರು.
ಈ ಕುರಿತು ಎಸಿಬಿ ಡಿವೈಎಸ್ಪಿ ಉಮೇಶ್ ರೆಡ್ಡಿ ಅವರಿಗೆ ಭರತ್ ಕುಮಾರ್ ದೂರು ನೀಡಿದ್ದರು.
ಡಿವೈಎಸ್ಪಿ ಅವರ ಸಲಹೆಯಂತೆ ಹಣ ನೀಡುವುದಾಗಿ ದೂರವಾಣಿ ಕರೆ ಮಾಡಿದ ಭರತ್ಕುಮಾರ್ಗೆ ನಾನು ಈಗ ಹುಣಸೂರು ತಾಲ್ಲೂಕು ಕಚೇರಿಯಿಂದ ಗಾವಡಗೆರೆಗೆ ಆಗಮಿಸುತ್ತಿದ್ದು ಅಲ್ಲಿಯೇ ಕೊಡುವಂತೆ ವಿಷಕಂಠ ನಾಯಕ ಹೇಳಿದ್ದರು.
ಗಾವಡಗೆರೆಯ ರಾಜಸ್ವ ನಿರೀಕ್ಷಕರ ಕಚೇರಿಯಲ್ಲಿ ಭರತ್ಕುಮಾರ್ ಹಣ ನೀಡುತ್ತಿದ್ದಾಗ ತಕ್ಷಣ ಹಣ ಸಮೇತ ರಾಜಸ್ವ ನಿರೀಕ್ಷಕ ವಿಷಕಂಠನಾಯಕನನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಕಾರ್ಯಚರಣೆಯಲ್ಲಿ ಡಿವೈಎಸ್ಪಿ ಉಮೇಶ್ರೆಡ್ಡಿ, ಎಸ್.ಐ ಶೇಖರ್, ವಿನಯ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.