ಮಳವಳ್ಳಿ,ಜು.5-ಪಡಿತರ ಅಂಗಡಿಯಿಂದ ತಂದ ಅಕ್ಕಿಯ ಗುಣಮಟ್ಟದ ಬಗ್ಗೆ ಅನುಮಾನಗೊಂಡ ವ್ಯಕ್ತಿಯೊಬ್ಬರು ನ್ಯಾಯಬೆಲೆ ಅಂಗಡಿಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಫುಡ್ ಇನ್ಸ್ಪೆಕ್ಟರ್ ಅಕ್ಕಿಯನ್ನು ಪರೀಕ್ಷೆಗೊಳಪಡಿಸಲು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಕೊತ್ತಿನಹಳ್ಳಿ ಗ್ರಾಮದ ರಾಚಯ್ಯ ಎಂಬುವರು ನ್ಯಾಯಬೆಲೆ ಅಂಗಡಿಯಿಂದ 28 ಕೆಜಿ ಅಕ್ಕಿ ಪಡೆದಿದ್ದರು. ಕೆಲದಿನ ಅದನ್ನು ಬಳಸಿದ್ದರು. ಮನೆಯಲ್ಲಿ ನಡೆಯಲಿರುವ ಕಾರ್ಯಕ್ರಮದ ನಿಮಿತ್ತ ಕಜ್ಜಾ ಮಾಡಲು ಅಕ್ಕಿಯನ್ನು ನೆನೆ ಹಾಕಿದ್ದರು. ಆದರೆ ನೆನೆದ ಅಕ್ಕಿಯನ್ನು ಮಿಲ್ ಮಾಡಿಸಿದರೆ ಅಕ್ಕಿ ಗಂಟು ಗಂಟಾಗಿದೆ. ಆತಂಕಗೊಂಡ ರಾಚಯ್ಯ ನ್ಯಾಯಬೆಲೆ ಅಂಗಡಿಗೆ ತಿಳಿಸಿದ್ದಾರೆ. ಇದನ್ನು ಪರಿಶೀಲಿಸಿದ ಅಂಗಡಿಯವರು ಆಹಾರ ಇಲಾಖೆಗೆ ಮಾಹಿತಿ ನೀಡಿದ್ದರಿಂದ ಫುಡ್ ಇನ್ಸ್ಪೆಕ್ಟರ್ ಕೃಷ್ಣಪ್ಪ ಅವರನ್ನು ಗುಣಮಟ್ಟದ ಪರೀಕ್ಷೆಗೆ ಅಕ್ಕಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ವರದಿ ಬಂದ ನಂತರವಷ್ಟೇ ಅಕ್ಕಿಯ ಗುಣಮಟ್ಟ ತಿಳಿಯಲಿದೆ ಎಂದು ಅವರು ಹೇಳಿದ್ದಾರೆ.