ಚಿಕ್ಕಮಗಳೂರು, ಜು.5- ನಗರಸಭೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡುವಂತೆ ಕೋರಿ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿಗೆ ಶಾಸಕ ಸಿ.ಟಿ.ರವಿ ನೇತೃತ್ವದಲ್ಲಿ ನಗರಸಭೆ ಅಧ್ಯಕ್ಷೆ ಮತ್ತು ಸದಸ್ಯರು ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದರು.
ಚಿಕ್ಕಮಗಳೂರು ನಗರ ದಿನೇದಿನೆ ವಿಸ್ತಾರವಾಗಿ ಬೆಳೆಯುತ್ತಿದ್ದು ರಾಜ್ಯದಲ್ಲಿ ಪ್ರಮುಖ ಪ್ರವಾಸಿ ಕ್ಷೇತ್ರವಾಗಿರುತ್ತದೆ. ಈ ಸಂಬಂಧ ನಗರಸಭೆಯಲ್ಲಿ ಅಧಿಕಾರಿ ಹಾಗೂ ನೌಕರರ ಕೊರತೆ ಹೆಚ್ಚಾಗಿರುವುದರಿಂದ ನಗರದ ಸರ್ವತೋಮುಖ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ತೊಂದರೆಯಾಗಿದೆ. ಈ ನಿಟ್ಟಿನಲ್ಲಿ ಕೂಡಲೆ ಖಾಲಿ ಇರುವ 246 ಹುದ್ದೆಗಳನ್ನು ಭರ್ತಿ ಮಾಡುವಂತೆ ಕೋರಿದರು.
ನಗರದ ನಾಗರಿಕರಿಗೆ ಬೀದಿ ದೀಪ, ನಗರ ನೈರ್ಮಲ್ಯ, ಕುಡಿಯುವ ನೀರಿನ ಸರಬರಾಜು ಸೇರಿದಂತೆ ಪ್ರಮುಖ ನಾಗರೀಕ ಸೌಲಭ್ಯಗಳನ್ನು ಒದಗಿಸುವುದು ಕಷ್ಟವಾಗುತ್ತಿದ್ದು, ಖಾಲಿ ಇರುವ ಹುದ್ದೆಗಳಾದ ಪರಿಸರ ಅಭಿಯಂತರರು, ಕಿರಿಯ ಅಭಿಯಂತರರು, ಕಿರಿಯ ಆರೋಗ್ಯ ನಿರೀಕ್ಷಕರು, ಸಮುದಾಯ ಸಂಘಟನಾಧಿಕಾರಿ, ಸಮುದಾಯ ಸಂಘಟಕರು, ಕರ ವಸೂಲಿಗಾರರು ಹಾಗೂ ಇತರೆ ಅಧಿಕಾರಿ ಸಿಬ್ಬಂದಿಗಳ ಕೊರತೆಯಿಂದಾಗಿ ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಇದ್ದರೂ ಕೂಡ ಸರ್ಕಾರದ ಪ್ರಮುಖ ಯೋಜನೆಗಳಡಿ ಮಂಜೂರು ಮಾಡಿರುವ ವಿವಿಧ ಸವಲತ್ತುಗಳನ್ನು ನಗರದ ಬಡ ಜನರಿಗೆ ಸಕಾಲದಲ್ಲಿ ಪರಿಣಾಮಕಾರಿಯಾಗಿ ತಲುಪಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ನಗರಸಭೆಯ ಪ್ರಮುಖ ಆದಾಯದ ಮೂಲಗಳಾದ ಉದ್ದಿಮೆ ಪರವಾನಗಿ ಶುಲ್ಕ, ಆಸ್ತಿ ತೆರಿಗೆ, ನೀರಿನ ತೆರಿಗೆ ಸೇರಿದಂತೆ ಇತರೆ ತೆರಿಗೆಗಳನ್ನು ಪರಿಣಾಮಕಾರಿಯಾಗಿ ವಸೂಲಾತಿ ಮಾಡಲು ಹಾಗೂ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲು ಅನಾನುಕೂಲವಾಗಿರುತ್ತದೆ ಎಂದು ವಿವರಿಸಿದರು. ನಗರಸಭೆ ಅಧ್ಯಕ್ಷೆ ಶಿಲ್ಪಾರಾಜಶೇಖರ್, ಉಪಾಧ್ಯಕ್ಷ ಸುಧೀರ್ ಸೇರಿದಂತೆ ಸದಸ್ಯರುಗಳು ಹಾಜರಿದ್ದರು.