ಪ್ಯಾಕಿಂಗ್ ತಂತ್ರಜ್ಞಾನ ಅಭಿವೃದ್ಧಿ

 

ಬೆಂಗಳೂರು, ಜು.5-ಪ್ಲಾಸ್ಟಿಕ್ ಹೊರತುಪಡಿಸಿ ಜೈವಿಕವಾಗಿ ಕರಗುವ ವಸ್ತುಗಳನ್ನು ಬಳಸಿ ಪ್ಯಾಕಿಂಗ್ ಮಾಡುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ ತರಬೇತಿ ನೀಡಲು 5 ಕೋಟಿ ರೂ. ವೆಚ್ಚದಲ್ಲಿ ಸಂಸ್ಥೆಯೊಂದನ್ನು ಸ್ಥಾಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಬಜೆಟ್ ಮಂಡಿಸಿ ಮಾತನಾಡಿದ ಅವರು, ಪ್ಲಾಸ್ಟಿಕ್ ಸಾಮಗ್ರಿಗಳ ಮಾರಾಟ ಮತ್ತು ಉತ್ಪಾದನೆಯನ್ನು ಕರ್ನಾಟಕದಲ್ಲಿ ನಿಷೇಧಿಸಲಾಗಿದೆ. ಹೀಗಾಗಿ ಪರ್ಯಾಯ ಪ್ಯಾಕಿಂಗ್ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಹಾಸನದಲ್ಲಿ ಒಂದು ಶತಮಾನದ ಹಿಂದೆ ಸ್ಥಾಪನೆಗೊಂಡಿರುವ ಕರ್ನಾಟಕ ಇಂಪ್ಲಿಮೆಂಟ್ ಮ್ಯಾನ್ಯುಫ್ಯಾಕ್ಚರಿಂಗ್ ಕಂಪೆನಿಯಲ್ಲಿ (ಕಿಮ್ಕೋ) ಅಭಿವೃದ್ಧಿಗೆ 10 ಕೋಟಿ ರೂ.ಗಳನ್ನು ನೀಡಲಾಗುತ್ತಿದೆ.
ಕಿಮ್ಕೋ ಸಂಸ್ಥೆಯಲ್ಲಿ ಪ್ರಸ್ತುತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕಾರ್ಯಾಗಾರ ನಡೆಯುತ್ತಿದೆ.
ಸಾರ್ವಜನಿಕ ಉದ್ದಿಮೆಗಳ ಇಲಾಖೆಯಡಿ ಬಹಳ ವರ್ಷಗಳಿಂದ ಲಾಭದಾಯಕವಾಗಿ ನಡೆಯುತ್ತಿರುವ ಸಂಸ್ಥೆಗಳ ಲಾಭಾಂಶವನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ಸರ್ಕಾರಿ ಸ್ವಾಮ್ಯದ 2 ಕಂಪೆನಿಗಳನ್ನು ಷೇರು ಮಾರುಕಟ್ಟೆಯ ಲಿಸ್ಟೆಡ್ ಕಂಪೆನಿಗಳ ಪಟ್ಟಿಗೆ ಸೇರ್ಪಡಿಸಲಾಗುವುದು ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ