ಚೀನಾ ದೇಶದೊಂದಿಗೆ ಸ್ಪರ್ಧೆ-8 ಜಿಲ್ಲೆಗಳಲ್ಲಿಹೂಡಿಕೆ

 

ಬೆಂಗಳೂರು, ಜು.5- ಚೀನಾ ದೇಶದೊಂದಿಗೆ ಸ್ಪರ್ಧೆ ನಡೆಸಿ ಮೊಬೈಲ್, ಆಟಿಕೆ, ಎಲೆಕ್ಟ್ರಾನಿಕ್, ಸೆರಾಮಿಕ್ಸ್ ಉತ್ಪನ್ನಗಳನ್ನು ಸ್ಥಳೀಯವಾಗಿಯೇ ಉತ್ಪಾದಿಸಲು ಮಹತ್ವಾಕಾಂಕ್ಷೆ ಯೋಜನೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಬಜೆಟ್‍ನಲ್ಲಿ ಪ್ರಸ್ತಾಪಿಸಿದ್ದು, ಇದರಿಂದ ರಾಜ್ಯದ 8 ಜಿಲ್ಲೆಗಳಲ್ಲಿ ತಲಾ 5 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆಯಾಗಿ ಪ್ರತಿ ಜಿಲ್ಲೆಯಲ್ಲೂ ಒಂದು ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.
ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಮ್ಮಿಶ್ರ ಸರ್ಕಾರದ ಚೊಚ್ಚಲ ಬಜೆಟ್‍ನ್ನು ವಿಧಾನಸಭೆಯಲ್ಲಿಂದು ಮಂಡಿಸಿ ಕೈಗಾರಿಕಾ ಕ್ಷೇತ್ರದಲ್ಲಿ ಚೀನಾ ದೇಶವನ್ನು ಹಿಂದಿಕ್ಕುವ ನಿಟ್ಟಿನಲ್ಲಿ ಕಾಂಪಿಟ್ ವಿತ್ ಚೀನಾ (ಚೀನಾ ದೇಶದೊಂದಿಗೆ ಸಕಾರಾತ್ಮಕ ಸ್ಪರ್ಧೆ) ಎಂಬ ಯೋಜನೆಯನ್ನು ಜಾರಿಗೆ ತರುತ್ತಿರುವುದಾಗಿ ಹೇಳಿದ್ದಾರೆ.
ಚೀನಾ ಉತ್ಪಾದಿತ ಪೀಠೋಪಕರಣ, ಸೌರಶಕ್ತಿ, ಎಲೆಕ್ಟ್ರಿಕ್ ಲೈಟಿಂಗ್ ವಸ್ತುಗಳು, ಸ್ನಾನಗೃಹ ವಸ್ತುಗಳು, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಆಟಿಕೆಗಳು ಕಳೆದೆರಡು ದಶಕಗಳಿಂದ ಮಾರುಕಟ್ಟೆಗೆ ದಾಳಿ ಇಟ್ಟಿವೆ. ಇದರಿಂದ ಸ್ವಂತ ಉದ್ದಿಮೆ ಮುಚ್ಚುವ ಸ್ಥಿತಿ ಬಂದಿದೆ. ಉತ್ಪಾದಿಸು ಇಲ್ಲವೆ, ನಾಶವಾಗು ಎಂಬ ಉಕ್ತಿಯಂತೆ ನಮ್ಮ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳಬೇಕಿದೆ. ಹೀಗಾಗಿ ಚೀನಾದೊಂದಿಗೆ ಸ್ಪರ್ಧೆಗಿಳಿಯಲು ಕರ್ನಾಟಕವನ್ನು ಸಜ್ಜುಗೊಳಿಸಲು ತೀರ್ಮಾನಿಸಿರುವುದಾಗಿ ಹೇಳಿದ್ದಾರೆ.
ಈ ಯೋಜನೆಯಲ್ಲಿ ಯಶಸ್ವಿ ಉದ್ಯಮಿಗಳ ನೇತೃತ್ವದಲ್ಲಿ ಯೋಜನಾ ಗುರಿ ಘಟಕ ಸ್ಥಾಪಿಸಲಾಗುತ್ತದೆ. ಹಳ್ಳಿಗಳ ಮಟ್ಟದಲ್ಲಿ ಬಿಡಿಭಾಗಗಳನ್ನು ಉತ್ಪಾದಿಸಿ, ತಾಲೂಕು ಮಟ್ಟದಲ್ಲಿ ಜೋಡಣೆ ಮಾಡಿ, ಜಿಲ್ಲಾ ಕೇಂದ್ರದಲ್ಲಿ ಅವುಗಳ ಮಾರುಕಟ್ಟೆಗಾಗಿ ಮಾಲ್‍ಗಳನ್ನು ತೆರೆಯಲಾಗುವುದು. ಇದಕ್ಕಾಗಿಯೇ ಜಿಲ್ಲಾ ಕೇಂದ್ರಗಳಲ್ಲಿ ಪ್ಲಗ್ ಅಂಡ್ ಪ್ಲೇ ಕೈಗಾರಿಕಾ ಶೆಡ್‍ಗಳನ್ನು ನಿರ್ಮಿಸಲಾಗುವುದು. ಪೂರಕವಾದ ಮಾನವಸಂಪನ್ಮೂಲ ವೃದ್ಧಿಗೊಳಿಸಲು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.
ಆಯಾ ಪ್ರದೇಶದ ಸಂಪನ್ಮೂಲ ವೃತ್ತಿ ಕೌಶಲ್ಯಗಳನ್ನು ಆಧರಿಸಿ ವಿವಿಧ ಜಿಲ್ಲೆಗಳಲ್ಲಿ ಉತ್ಪಾದನಾ ವಲಯಗಳನ್ನು ಸ್ಥಾಪಿಸಲಾಗುತ್ತದೆ.
ಕಲಬುರಗಿ ಜಿಲ್ಲೆಯನ್ನು ಭಾರತದ ಸೋಲಾರ್ ಜಿಲ್ಲೆಯನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಇಲ್ಲಿ ಸೌರಶಕ್ತಿ ವಿದ್ಯುತ್ ಉತ್ಪಾದಿಸಲು ಅಗತ್ಯವಿರುವ ಸೋಲಾರ್ ಪ್ಯಾನಲ್, ಇನ್ವರ್ಟರ್‍ಗಳು, ಕ್ಯಾಪಸಿಟರ್‍ಗಳು ಮತ್ತು ಲ್ಯುಮಿನೇಟರ್‍ಗಳನ್ನು ಉತ್ಪಾದಿಸಲಾಗುತ್ತದೆ.
ಭಾರತ ದೇಶದಲ್ಲಿ ವಿದ್ಯುತ್ ದೀಪದ ಉದ್ಯಮ ಸ್ಥಳೀಯವಾಗಿ 46 ಸಾವಿರ ಕೋಟಿ ಮೌಲ್ಯದ್ದಾಗಿದೆ. ಅಷ್ಟೂ ವಿದ್ಯುತ್ ದೀಪಗಳು ಚೀನಾದಿಂದ ಆಮದಾಗುತ್ತಿರುವ ಎಲ್‍ಇಡಿಗಳು ಆಕ್ರಮಿಸಿವೆ. ಅದಕ್ಕಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಗೃಹಪಯೋಗಿ ಎಲ್‍ಇಡಿ ಗಳನ್ನು ಉತ್ಪಾದಿಸುವ ಉದ್ಯಮವನ್ನು ಸ್ಥಾಪಿಸಲಾಗುವುದು.
ಸ್ನಾನಗೃಹದ ನೆಲಹಾಸುಗಳು, ಸ್ಯಾನಿಟರಿ ಉಪಕರಣಗಳು ಚೀನಾದಿಂದಲೇ ಆಮದಾಗುತ್ತಿವೆ. ಅದಕ್ಕೆ ಬದಲಾಗಿ ಹಾಸನ ಜಿಲ್ಲೆಯಲ್ಲೇ ಉತ್ಪಾದಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ನಮ್ಮ ಸರ್ಕಾರ ಹೊಂದಿದೆ.
ದೇಶಿ ಆಟಿಕೆಗಳ ಸಣ್ಣ ಉದ್ಯಮಗಳು ನಮ್ಮಲ್ಲಿದ್ದರೂ ಬ್ಯಾಟರಿ ಮತ್ತು ವಿದ್ಯುತ್ ಚಾಲಿತ ಆಟಿಕೆಗಳು ಚೀನಾದಿಂದಲೇ ಬರುತ್ತಿವೆ. ಅವುಗಳಲ್ಲಿ ಐಸಿಬಿ, ಚಿಪ್, ಮೈಕ್ರೋ ಡಿಸಿ ಮೋಟಾರ್‍ಗಳನ್ನು ಅಳವಡಿಸಿರುತ್ತಾರೆ. ಇಂತಹ ಆಟಿಕೆಗಳಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಇದ್ದು, ಅವುಗಳನ್ನು ಚೀನಾಕ್ಕೆ ಸವಾಲೊಡ್ಡುವಂತೆ ಕೊಪ್ಪಳದಲ್ಲಿ ತಯಾರಿಸುವ ಕ್ಲಸ್ಟರ್‍ಗಳನ್ನು ಸ್ಥಾಪಿಸಲಾಗುವುದು.
ಐಸಿಬಿ ಮತ್ತು ಐಸಿ ಚಿಪ್‍ಗಳಿಗೆ ವಿಶ್ವಾದ್ಯಂತ ಅಗಾಧ ಬೇಡಿಕೆ ಇದೆ. ವಿಶ್ವಕ್ಕೆ ಶೇ.80ರಷ್ಟು ಐಸಿಬಿ ಚಿಪ್‍ಗಳನ್ನು ಥೈವಾನ್ ದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಮೈಸೂರು-ಬೆಂಗಳೂರು ನಡುವೆ ಈ ಚಿಪ್‍ಗಳನ್ನು ತಯಾರಿಸುವ ಹಲವು ಕಂಪನಿಗಳು ಹುಟ್ಟಿಕೊಂಡಿವೆ. ಮೈಸೂರು ಜಿಲ್ಲೆಯಲ್ಲಿ ವಿಶೇಷವಾಗಿ ಐಸಿಬಿ ಚಿಪ್ ತಯಾರಿಸುವ ಸಂಸ್ಥೆಯನ್ನು ಸ್ಥಾಪಿಸಲಾಗುವುದು.
ಬಳ್ಳಾರಿ ಜಿಲ್ಲೆ ವಸ್ತ್ರ ಉದ್ಯಮಕ್ಕೆ ಪ್ರಖ್ಯಾತಿ ಪಡೆದಿದೆ. ವಿಶ್ವ ವಾಣಿಜ್ಯ ಸಂಸ್ಥೆಯು ಬಹುವಸ್ತ್ರ ಒಪ್ಪಂದವನ್ನು ರದ್ದು ಮಾಡಿದ ನಂತರ ಇಲ್ಲಿಗೆ ಅನೇಕ ಅವಕಾಶಗಳು ದೊರೆಯುತ್ತಿವೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ವಸ್ತ್ರ ಉದ್ಯಮ ಆರಂಭಿಸಲಾಗುವುದು.
ಪ್ರತಿವರ್ಷ ಭಾರತಕ್ಕೆ ಚೀನಾದಿಂದ 5 ಲಕ್ಷ ಕೋಟಿಗಳಿಗಿಂತಲೂ ಹೆಚ್ಚಿನ ಮೊತ್ತದ ಮೊಬೈಲ್‍ಗಳು ಆಮದಾಗುತ್ತಿವೆ. ಹೊಸದಾಗಿ ಬರುವ ಮೊಬೈಲ್‍ಗಳಲ್ಲಿ ಅನೇಕ ರೀತಿಯ ಆಪ್ಷನ್‍ಗಳಿರುತ್ತವೆ. ಎರಡು ವರ್ಷದಲ್ಲಿ ಮೊಬೈಲ್‍ಗಳು ಪರಿವರ್ತನೆಗೊಂಡು ಮೇಲ್ದರ್ಜೆಗೇರುತ್ತಿರುತ್ತವೆ. ಹಳೇ ಸ್ಮಾರ್ಟ್‍ಫೆÇೀನ್‍ಗಳ ಬಿಡಿಭಾಗಗಳನ್ನು ಪ್ರತ್ಯೇಕಿಸಿದರೆ ಪ್ರತಿ ಫೆÇೀನ್‍ನಿಂದ 4 ಸಾವಿರ ಮೌಲ್ಯದ ಬಿಡಿಭಾಗಗಳನ್ನು ಸಂಗ್ರಹಿಸಬಹುದು. ಹೀಗಾಗಿ ಚಿಕ್ಕಬಳ್ಳಾಪುರದಲ್ಲಿ ಒಟ್ಟು 3 ಕೋಟಿ ಫೆÇೀನ್‍ಗಳ ಬಿಡಿಭಾಗಗಳನ್ನು ಬೇರ್ಪಡಿಸುವ ಘಟಕಗಳನ್ನು ಆರಂಭಿಸಲಾಗುವುದು.
ತುಮಕೂರು ಜಿಲ್ಲೆಯಲ್ಲಿ ಸ್ಫೋಟ್ರ್ಸ್ ಮತ್ತು ಫಿಟ್ನೆಸ್ ವಸ್ತುಗಳ ತಯಾರಿಕಾ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಒಟ್ಟು 23 ಕ್ರೀಡೆಗಳಿಗೆ ಬೇಕಾದ ಸಾಮಗ್ರಿಗಳನ್ನು ಉತ್ಪಾದಿಸುವ ಮೂಲಕ ಮುಂದಿನ 4 ವರ್ಷಗಳಲ್ಲಿ ತುಮಕೂರು ಜಿಲ್ಲೆಯಲ್ಲಿ ಸುಮಾರು 2 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆಯ ಉದ್ಯಮಗಳನ್ನು ಆರಂಭಿಸಿ ಒಂದು ಲಕ್ಷ ಮಂದಿಗೆ ಉದ್ಯೋಗ ನೀಡಲಾಗುವುದು.
ಬೀದರ್ ಜಿಲ್ಲೆಯಲ್ಲಿ ಕೃಷಿ ಯಂತ್ರೋಪಕರಣಗಳನ್ನು ಉತ್ಪಾದಿಸುವ ಘಟಕಗಳನ್ನು ಆರಂಭಿಸಲು ಮುಂದಿನ ನಾಲ್ಕು ವರ್ಷದಲ್ಲಿ 2 ಸಾವಿರ ಕೋಟಿ ಬಂಡವಾಳ ಹೂಡಲಾಗುತ್ತದೆ ಎಂದು ವಿವರಿಸಿದ್ದಾರೆ.
ಮೇಲಿನ ಯೋಜನೆಗಳನ್ನು ಅನುಷ್ಟಾನಗೊಳಿಸಲು ಆರು ತಿಂಗಳಿಂದ ಎರಡು ವರ್ಷದವರೆಗೆ ನುರಿತ ಕೆಲಸಗಾರರು ಬೇಕಾಗುತ್ತಾರೆ. ಈ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಮೊದಲ ಹಂತದ ತರಬೇತಿ ಶಾಲೆಗಳನ್ನು ಆರಂಭಿಸಲಾಗುವುದು.
ಸ್ಥಳೀಯ ಕೈಗಾರಿಕೆಗಳನ್ನು ಪೆÇ್ರೀ ಯೋಜನೆಯನ್ನು ಅನುಷ್ಟಾನಗೊಳಿಸುವ ಈ ಏಳು ಜಿಲ್ಲೆಗಳಲ್ಲಿ ಕೈಗಾರಿಕಾ ತರಬೇತಿಗಾಗಿಯೇ 500 ಕೋಟಿ ರೂ.ಗಳನ್ನು ಒದಗಿಸಲಾಗುತ್ತದೆ.
ನಾಲ್ಕು ವರ್ಷದಲ್ಲಿ ಪ್ರತಿ ಜಿಲ್ಲೆಯಲ್ಲಿ 2 ಸಾವಿರ ಕೋಟಿ ರೂ.ಬಂಡವಾಳವನ್ನು ಈಕ್ವಿಟಿ ಷೇರುಗಳ ರೂಪದಲ್ಲಿ ಸಂಗ್ರಹಿಸಿ ನೀಡಲಾಗುವುದು. ಖಾಸಗಿ ಸಂಸ್ಥೆಯವರು ಸುಮಾರು 3 ಸಾವಿರ ಕೋಟಿ ಬಂಡವಾಳ ಹೂಡಬೇಕಾಗುತ್ತದೆ. ಪ್ರತಿ ಜಿಲ್ಲೆಗೆ ಒಟ್ಟು 5 ಸಾವಿರ ಕೋಟಿ ರೂ ಬಂಡವಾಳ ಸಂಗ್ರಹವಾಗಲಿದೆ. ಬ್ಯಾಂಕ್‍ಗಳ ಮುಖೇನ 15 ಸಾವಿರ ಕೋಟಿ ರೂ. ಸಾಲ ಪಡೆಯಬಹುದಾಗಿದೆ. ಈ ಕಾರ್ಯಕ್ರಮಗಳಿಂದ ಸರ್ಕಾರದ ಹೂಡಿಕೆಗಳನ್ನು ಫಂಡ್ ಮ್ಯಾನೇಜರ್ ಮೂಲಕ ಹೂಡಿಕೆ ಮಾಡಲಾಗುವುದು.
ಪ್ರತಿ ಜಿಲ್ಲೆಯಲ್ಲೂ ಈ ಯೋಜನೆಯಿಂದ ಒಂದು ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಈ ಕೈಗಾರಿಕಾ ಕ್ರಾಂತಿಯಿಂದ 8 ಲಕ್ಷ ಕೋಟಿ ಉದ್ಯೋಗಗಳು ಜಿಲ್ಲಾ ವಲಯದಲ್ಲಿ ಸೃಷ್ಟಿಯಾಗಲಿವೆ. ಮುಂದಿನ ವರ್ಷಗಳಲ್ಲಿ ಕರ್ನಾಟಕ ಸರ್ಕಾರ 14 ಸಾವಿರ ಕೋಟಿ ಬಂಡವಾಳ ಹೂಡಲಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ