ಚನ್ನರಾಯಪಟ್ಟಣ, ಜು.5- ತಾಲ್ಲೂಕಿನ ರೈತರಿಗೆ ನೆರವಾಗುವ ದೃಷ್ಠಿಯಿಂದ ಕೃಷಿ ಇಲಾಖೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ತಾಲೂಕಿನ ಬಾಗೂರು ಹೋಬಳಿಯಲ್ಲಿ ಕಬಾಗೂರು ಹೋಬಳಿ ಕೇಂದ್ರದಲ್ಲಿ ಈ ಭಾಗದ ರೈತರಿಗೆ ಕೃಷಿ ಯಂತ್ರೋಪಕರಣ ಕೇಂದ್ರ ಕೃಷಿ ಯಂತ್ರಧಾರೆ ಸ್ಥಾಪಿಸಲಾಗಿದೆ. ಬಾಗೂರು ಹೋಬಳಿಯ ವ್ಯಾಪ್ತಿಯಲ್ಲಿನ ರೈತರಿಗೆ ಹೆಚ್ಚಿನ ಕೃಷಿ ಚಟುವಟಿಕೆ ನೆಡೆಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕಡಿಮೆ ದರದಲ್ಲಿ ಕೃಷಿ ಯಂತ್ರಧಾರೆಯಿಂದ ಕಳೆದ 4 ವರ್ಷಗಳಿಂದ ಈ ಭಾಗದ ಎಲ್ಲಾ ರೈತರಿಗೂ ಕೃಷಿ ಯಂತ್ರೋಪಕರಣಗಳನ್ನು ಶೇ.30ರಷ್ಟು ಕಡಿಮೆ ಬಾಡಿಗೆಯಲ್ಲಿ ಕ್ಲಪ್ತ ಸಮಯದಲ್ಲಿ ನೀಡಲಾಗುತ್ತಿದೆ.
ಹೋಬಳಿಯ ಎಲ್ಲಾ ಗ್ರಾಮಗಳಲ್ಲಿ ಮಾಹಿತಿ ಕಾರ್ಯಕ್ರಮ, ಪ್ರಾತ್ಯಕ್ಷಿತೆ. ರೈತರ ಮೊಬೈಲ್ಗೆ ಎಸ್.ಎಂ.ಎಸ್ ನೀಡಿ, ಹಾಗೂ ರೈತರ ಸಂಘಗಳನ್ನು ರಚನೆ ಮಾಡಿ, ಬಾಡಿಗೆಗೆ ನೀಡಲಾಗುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕಚೇರಿಯಲ್ಲಿ ಈ ವರೆಗೆ ಸುಮಾರು 5000 ರೈತರ ನೊಂದಾವಣೆ ಮಾಡಿ, 4500 ರೈತರು ಯಂತ್ರಗಳನ್ನು ಬಾಡಿಗೆಗೆ ಪಡೆದುಕೊಂಡಿದ್ದಾರೆ. ಈ ಭಾಗದ ರೈತರ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಉಪಯೋಗವಾಗುವಂತಹ ಕಲ್ಟಿವೇಟರ್, ರೋಟೋವೇಟರ್, ರಾಗಿ ಕಟಾವು ಯಂತ್ರ ಜೋಳ/ಭತ್ತ ಒಕ್ಕಣೆ, ಸ್ಪ್ರೇಯರ್ ಮತ್ತು ಕಳೆ ಕೀಳುವ ಯಂತ್ರಗಳು ಕೇಂದ್ರದಲ್ಲಿ ಎಲ್ಲಾ ಸಮಯದಲ್ಲೂ ಲಭ್ಯವಿದೆ ಎಂದು ಹೇಳಲಾಗಿದೆ. ಪ್ರಸ್ತುತ ವರ್ಷ ಉತ್ತಮ ಮಳೆಯಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಯಂತ್ರಧಾರೆಯ ಈ ಸೌಲಭ್ಯ ಪಡೆದುಕೊಂಡು ಉತ್ತಮ ಬೆಳೆ ಬೆಳೆದು ಉತ್ತಮ ಇಳುವರಿ ಬರಲೆಂಬುದೇ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಉದ್ದೇಶವಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಯಂತ್ರಧಾರೆಯ ಬಗ್ಗೆ ರೈತರ ಅಭಿಪ್ರಾಯ: ಬಾಗೂರು ಕೃಷಿ ಯಂತ್ರಧಾರೆಯ ಯಂತ್ರೋಪಕರಣಗಳನ್ನು ಶೇ.100ರಷ್ಟು ನಾನು ಬಳಸಿಕೊಂಡಿದ್ದೇನೆ, ಕ್ಲಿಪ್ತ ಸಮಯದಲ್ಲಿ ಯಂತ್ರಧಾರೆಯ ಸೇವೆ ನಮಗೆ ದೊರೆತಿದೆ. ಉತ್ಪಾದನಾ ವೆಚ್ಚದಲ್ಲಿ ತಮಗೆ ಸರಿಸುಮಾರು ಶೇ.30ರಷ್ಟು ಹಣ ಉಳಿಕೆಯಾಗಿದೆ ಎಂದು ರೈತ ಶಂಕರಲಿಂಗೇಗೌಡ ಹೇಳಿದ್ದಾರೆ. ನನ್ನ ಜಮೀನು ಮಳೆ ಆಶ್ರಿತವಾಗಿರುವುದರಿಂದ ಸಮಯಕ್ಕೆ ಸರಿಯಾಗಿ ಉಳುಮೆ ಮಾಡಲು ಯಂತ್ರಗಳು ಸಿಗದೆ ಈ ಹಿಂದೆ ನನ್ನ ಜಮೀನು ಪಾಳು ಬಿದ್ದಿದೆ. ಈಗ ನಾಲ್ಕು ವರ್ಷಗಳಿಂದ ಸತತವಾಗಿ ಜಮೀನಿನಲ್ಲಿ ಬೆಳೆ ಬೆಳೆಯಲು ಯಂತ್ರಧಾರೆಯಿಂದ ತುಂಬಾ ಅನುಕೂಲವಾಗಿದೆ ಎನ್ನುತ್ತಾರೆ ಕುಂಬಾರಹಳ್ಳಿ, ಪ್ರಗತಿಪರ ರೈತ ಅಮಾಸೆಗೌಡ.