ಜಮೀರ್ ಅಹಮ್ಮದ್ ಖಾನ್ ಮತ್ತು ಯು.ಟಿ.ಖಾದರ್ ಅವರನ್ನು ನೋಡಬೇಕು ಎನ್ನಿಸುತ್ತಿದೆ.- ಸ್ಪೀಕರ್, ಬಯಕೆ

 

ಬೆಂಗಳೂರು, ಜು.4- ನನಗೆ ಸಚಿವರಾದ ಜಮೀರ್ ಅಹಮ್ಮದ್ ಖಾನ್ ಮತ್ತು ಯು.ಟಿ.ಖಾದರ್ ಅವರನ್ನು ನೋಡಬೇಕು ಎನ್ನಿಸುತ್ತಿದೆ. ದಯವಿಟ್ಟು ಅವರನ್ನು ಕರೆಸಿ ಎಂದು ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ಸರ್ಕಾರಕ್ಕೆ ನಯವಾಗಿ ಛಾಟಿ ಬೀಸಿದರು.
ಸಚಿವರ ಗೈರು ಹಾಜರಿ ಮತ್ತು ಕೆಲ ಸಚಿವರು ತಮ್ಮ ಆಸನದಲ್ಲಿ ಕುಳಿತುಕೊಳ್ಳದೆ ಬೇರೆ ಆಸನದಲ್ಲಿ ಕುಳಿತುಕೊಂಡಿದ್ದಕ್ಕೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ ಸ್ಪೀಕರ್, ಸದನಕ್ಕೆ ಸಚಿವರಾದ ಜಮೀರ್ ಅಹಮ್ಮದ್ ಖಾನ್ ಮತ್ತು ಯು.ಟಿ.ಖಾದರ್ ಆಗಮಿಸಬೇಕು. ಉಪಮುಖ್ಯಮಂತ್ರಿಗಳಾದ ಪರಮೇಶ್ವರ್ ಅವರು ಅವರನ್ನು ಕರೆಸುವ ವ್ಯವಸ್ಥೆ ಮಾಡಬೇಕು. ನನಗೆ ಅವರಿಬ್ಬರನ್ನು ನೋಡುವ ಬಯಕೆಯಾಗಿದೆ ಎಂದರು.

ಅದೇ ಸಮಯದಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸದನಕ್ಕೆ ಆಗಮಿಸಿದರು. ತಡವಾಗಿ ಆಗಮಿಸಿದ ಸಚಿವರನ್ನು ತಮ್ಮದೇ ದಾಟಿಯಲ್ಲಿ ಸ್ವಾಗತಿಸಿದ ರಮೇಶ್‍ಕುಮಾರ್, ಡಿ.ಕೆ.ಶಿವಕುಮಾರ್ ಅವರಿಗೆ ಸ್ವಾಗತ. ನಿಜವಾದ ಪವರ್ ಇರುವುದು ಡಿ.ಕೆ.ಶಿವಕುಮಾರ್ ಅವರ ಬಳಿ. ಕುಮಾರಸ್ವಾಮಿ ಹೆಸರಿಗಷ್ಟೇ ಮುಖ್ಯಮಂತ್ರಿ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಮ್ಮ ಆಸನ ಬಿಟ್ಟು ಹಿಂದಿನ ಸೀಟಿನಲ್ಲಿ ಕುಳಿತು ಸಚಿವ ಸಿ.ಎಸ್.ಪುಟ್ಟರಾಜು ಅವರ ಜತೆ ಚರ್ಚೆ ಮಾಡುತ್ತಿದ್ದರು. ಅದಕ್ಕೆ ನಯವಾಗಿಯೇ ಹೇಳಿದ ಸ್ಪೀಕರ್ ಅವರು, ರೇವಣ್ಣ ಅವರು ವಾಸ್ತು ಪ್ರಕಾರ ಮುಂದಿನ ಸಾಲಿನಲ್ಲಿ ಕುಳಿತರೆ ಭೂಷಣ. ದಯವಿಟ್ಟು ಮುಂದೆ ಬಂದು ಕುಳಿತುಕೊಳ್ಳಿ ಎಂದು ತಾಕೀತು ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ