ವಿಧಾನಸಭೆಯಲ್ಲಿ ಹೊಗಳಿಕೆ-ಬೊಗಳಿಕೆ-ಆಕ್ರೋಶ

 

ಬೆಂಗಳೂರು, ಜು.4- ಸಚಿವ ಶಿವಾನಂದಪಾಟೀಲ್ ಅವರ ಆಕ್ಷೇಪಾರ್ಹ ಮಾತುಗಳ ಬಗ್ಗೆ ವಿಧಾನಸಭೆಯಲ್ಲಿ ಪ್ರತಿಪಕ್ಷದ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ವಿಧಾನಸಭೆಯಲ್ಲಿ ಬಿಜೆಪಿಯ ಹಿರಿಯ ಶಾಸಕ ಗೋವಿಂದಕಾರಜೋಳ ಮಾತನಾಡುತ್ತಿದ್ದಾಗ, ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಾ ನೀರಾವರಿ ಯೋಜನೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದು ಆರೋಪಿಸುತ್ತಿದ್ದರು.

ಈ ಹಂತದಲ್ಲಿ ಎದ್ದುನಿಂತ ಸಚಿವ ಶಿವಾನಂದಪಾಟೀಲ್ ಅವರು, ನಿಮ್ಮ ಪಕ್ಷದ ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್ ಹಿಂದಿನ ನೀರಾವರಿ ಸಚಿವ ಎಂ.ಬಿ.ಪಾಟೀಲ್ ಉತ್ತಮವಾಗಿ ಕೆಲಸ ಮಾಡಿದ್ದಾರೆ ಎಂದು ಹೊಗಳುತ್ತಾರೆ. ನೀವು ನೋಡಿದರೆ ಬೊಗಳುತ್ತೀರಾ ಎಂದು ಹೇಳಿದರು.
ಇದು ಬಿಜೆಪಿ ಶಾಸಕರನ್ನು ಕೆರಳಿಸಿತ್ತು. ಜೆ.ಸಿ.ಮಾಧುಸ್ವಾಮಿ, ಬಸನಗೌಡಪಾಟೀಲ್ ಯತ್ನಾಳ್, ಅರಗಜ್ಞಾನೇಂದ್ರ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಸಚಿವರ ಪದ ಬಳಕೆ ಸರಿಯಲ್ಲ. ಇಷ್ಟೊಂದು ಧಿಮಾಕು ಇರಬಾರದು ಎಂದು ಕಿಡಿಕಾರಿದರು.

ಬಸನಗೌಡಪಾಟೀಲ್ ತಾವು ಸದನದಿಂದ ಹೊರಗೆ ನೀಡಿರುವ ಹೇಳಿಕೆಗೆ ಬದ್ದನಾಗಿರುವುದಾಗಿ ಹೇಳಿದರು. ಎಂ.ಬಿ.ಪಾಟೀಲ್ ಜಲಸಂಪನ್ಮೂಲ ಸಚಿವರಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಅದನ್ನು ಹೇಳಲು ನನಗೆ ಯಾವುದೇ ಮುಜುಗರ ಇಲ್ಲ. ನಾನು ಯಾರಿಗೂ ಹೆದರುವುದಿಲ್ಲ ಎಂದರು.
ಆದರೆ, ನಿಮ್ಮ ಪದ ಬಳಕೆ ಸರಿಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಮಧ್ಯ ಪ್ರವೇಶಿಸಿದ ಸಚಿವ ಶಿವಾನಂದಪಾಟೀಲ್, ನನ್ನ ಪದ ಬಳಕೆಯಿಂದ ಮನಸ್ಸಿಗೆ ನೋವಾಗಿದ್ದರೆ ಅದನ್ನು ವಾಪಸ್ ಪಡೆಯುತ್ತೇನೆ ಎಂದು ಹೇಳುವ ಮೂಲಕ ವಿಷಯಕ್ಕೆ ತೆರೆ ಎಳೆದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ