ಬೆಂಗಳೂರು,ಜು.4-ನಗರದ ಶ್ರೀ ಸಾಯಿರಾಮ್ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ವಿನೂತನ ಆವಿಷ್ಕಾರಗಳಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಿ ಕಾಲೇಜಿಗೆ ಹಾಗೂ ನಗರಕ್ಕೆ ಕೀರ್ತಿ ತಂದಿದ್ದಾರೆ.
ಪ್ರೆಸ್‍ಕ್ಲಬ್‍ನಲ್ಲಿ ವಿನೂತನ ಯೋಜನೆಗಳನ್ನು ವಿದ್ಯಾರ್ಥಿಗಳು ಪ್ರಾಯೋಗಿಕ ಪ್ರದರ್ಶನವನ್ನು ಮಾಡಿ ಮೆಚ್ಚುಗೆ ಗಳಿಸಿದರು.
ಸಾಮಾನ್ಯವಾಗಿ ಈಗ ಎಲ್ಲರ ಕೈಯಲ್ಲೂ ಮೊಬೈಲ್ ಇದ್ದೇ ಇರುತ್ತದೆ. ಆದರೆ ಮೊಬೈಲ್ ಬ್ಯಾಟರಿ ನಿಯಂತ್ರಣ ಮಾಡುವುದು ಕಷ್ಟ. ಎಮರ್ಜೆನ್ಸಿ ಚಾರ್ಜರ್, ಎರಡೆರಡು ಬ್ಯಾಟರಿ ಹೀಗೆ ಇನ್ನಿಲ್ಲದ ಕಸರತ್ತುಗಳನ್ನು ಮಾಡಿ ಮೊಬೈಲ್ ಚಾರ್ಜ್ ನಿಯಂತ್ರಣಕ್ಕೆ ಪ್ರಯತ್ನಿಸುತ್ತಾರೆ.
ಇದೀಗ ಸಾಯಿರಾಮ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮಾನವನ ದೇಹದ ಉಷ್ಣಾಂಶ ಹಾಗೂ ಸೂರ್ಯನ ಬೆಳಕಿನಿಂದಲೇ ಮೊಬೈಲ್ ಚಾರ್ಜ್ ಮಾಡುವ ವಿಶೇಷ ಯಂತ್ರವನ್ನು ಕಂಡು ಹಿಡಿದಿದ್ದಾರೆ.
ಇದಕ್ಕೆ ಸೌರ ಚಾಲಿತ ಅಡಾಪ್ಟರ್ ಎಂದು ಹೆಸರಿಟ್ಟಿದ್ದಾರೆ. ಈ ಅಡಾಪ್ಟರ್ ಹಾಗೂ ಮೊಬೈಲ್ ನಡುವೆ ಒಂದು ವೈರ್ ಸಂಪರ್ಕ ಕಲ್ಪಿಸಿ( ಕ್ಲಿಪ್ ಇರುವ ವೈರ್) ಅದರಲ್ಲಿನ ಕ್ಲಿಪ್‍ನ್ನು ಶರ್ಟ್‍ಗೆ ಸಿಕ್ಕಿಸಿದರೆ ಬ್ಯಾಟರಿ ತಾನಾಗಿಯೇ ಚಾರ್ಜ್ ಆಗುತ್ತದೆ. ಇದು ನಿಜಕ್ಕೂ ಎಲ್ಲರಿಗೂ ಹೆಚ್ಚು ಅನುಕೂಲವಾಗಲಿದೆ.
ವಿಕಲಚೇತನರು ತಾವು ಕುಳಿತುಕೊಳ್ಳುವ ಚೇರ್‍ನ ಚಕ್ರವನ್ನು ತಾವೇ ತಿರುಗಿಸಿಕೊಳ್ಳಬೇಕು. ಇಂಥವರ ಅನುಕೂಲಕ್ಕೆ ಇದೇ ವಿದ್ಯಾರ್ಥಿಗಳು ಒಂದು ಹೆಡ್‍ಬ್ಯಾಂಡ್(ವೀಲ್ ಚೇರ್ ಹಾಗೂ ಬ್ಯಾಂಡ್‍ಗೆ ಸಂಪರ್ಕ ಕಲ್ಪಿಸುವ)ನ್ನು ತಯಾರಿಸಿದ್ದಾರೆ.
ಇದನ್ನು ಚೇರ್ ಮೇಲೆ ಕುಳಿತವರು ತಲೆಗೆ ಹಾಕಿಕೊಂಡರೆ ಅವರು ಯಾವ ದಿಕ್ಕಿಗೆ ಮುಖ ತಿರುಗಿಸುತ್ತಾರೋ ಆ ಕಡೆಗೆ ಚೇರ್ ಸಾಗಲಿದೆ.
ಕೊಳವೆ ಬಾವಿಗಳಲ್ಲಿ ಮಕ್ಕಳು ಬಿದ್ದಾಗ ಅವರನ್ನು ಮೇಲೆತ್ತಲು ಹರಸಾಹಸ ಪಡಬೇಕಾಗುತ್ತದೆ. ಮನೆಯವರ ದುಃಖ, ಆತಂಕ ಹೇಳತೀರದು. ಇಂಥ ಘಟನೆಗಳು ನಡೆದಾಗ ಬಾವಿಯಲ್ಲಿ ಬಿದ್ದ ಮಗುವನ್ನು ಮೇಲೆತ್ತಲು ಬೋರ್‍ವೆಲ್ ರೆಸ್ಕ್ಯೂ ರೋಬೊಟ್ ಎಂಬ ವಿಶೇಷ ಸಾಧನವನ್ನು ವಿದ್ಯಾರ್ಥಿಗಳು ಕಂಡುಹಿಡಿದಿದ್ದಾರೆ.
ಸದ್ಯಕ್ಕೆ ಈ ರೆಸ್ಕ್ಯೂ ರೋಬೊಟ್‍ನಿಂದ 10 ಅಡಿ ಆಳದಲ್ಲಿ ಮಗು ಇದ್ದರೆ ಮೇಲೆತ್ತಲು ಸಾಧ್ಯ. ಇದನ್ನು ಇನ್ನಷ್ಟು ಅಭಿವೃದ್ಧಿಪಡಿಸಿ 50 ಅಡಿ ಆಳದಲ್ಲಿ ಮಗು ಸಿಲುಕಿದ್ದರೂ ಮೇಲೆತ್ತುವ ಕುರಿತು ಸಂಶೋಧನೆಯನ್ನು ವಿದ್ಯಾರ್ಥಿಗಳು ಮಾಡುತ್ತಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಕಾಲೇಜು ಪ್ರಾಂಶುಪಾಲ ಡಾ.ವೈ.ವಿಜಯಕುಮಾರ್ ತಿಳಿಸಿದರು.
ಆನೇಕಲ್‍ನಲ್ಲಿರುವ ಸಾಯಿರಾಮ್ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ ಮೆಕಾನಿಕಲ್ ಕಂಪ್ಯೂಟರ್ ಮತ್ತಿತರ ವಿಭಾಗದ ವಿದ್ಯಾರ್ಥಿಗಳು ತರಗತಿ ಮುಗಿದ ನಂತರ ಇಂತಹ ನೂತನ ಅವಿಷ್ಕಾರಗಳಲ್ಲಿ ತೊಡಗುತ್ತಾರೆ. ಅದಕ್ಕಾಗಿಯೇ ಇನೋವೇಟಿವ್ ಸೆಂಟರ್ ಆರಂಭಿಸಲಾಗಿದೆ ಎಂದು ಡಾ.ವೈ.ವಿಜಯಕುಮಾರ್ ತಿಳಿಸಿದರು.
ವಿದ್ಯಾರ್ಥಿಗಳು ಪೆಡ್ಲಿಂಗ್ ಇರುವ ವಿನೂತನ ಸೋಲಾರ್ ಚಾಲಿತ ಪರಿಸರ ಸ್ನೇಹಿ ದಿ ಫ್ಯೂಚರ್ ಕಾರನ್ನು ತಯಾರಿಸಿದ್ದಾರೆ. ಎಡುವಿಸ್ತಾ ಎಂಬ ಕನ್ನಡಕ ಮಾದರಿಯ ವಸ್ತುವನ್ನು ಸಿದ್ಧಪಡಿಸಿದ್ದು , ಇದರಿಂದ ಕುಳಿತಲ್ಲಿಂದಲೇ ಯಾವುದೇ ಯಂತ್ರದ ಒಳಭಾಗವನ್ನು ನೋಡಬಹುದಾಗಿದೆ.
ರೇಡಿಯೋ ತರಂಗಗಳನ್ನು ಆಧರಿಸಿ ಮೆಟ್ರೋ ನಿಲ್ದಾಣದಲ್ಲಿ ತಾವಾಗಿಯೇ ಗೇಟ್ ತೆರೆಯುವ ಯಂತ್ರ, ಕೊಳಚೆ, ಮರಳು ಹೀಗೆ ಯಾವುದೇ ಮಣ್ಣಿನಲ್ಲಿ ಚಲಿಸಬಹುದಾದ ಆಲ್‍ಟರೇನ್ ವಾಹನವನ್ನು ವಿದ್ಯಾರ್ಥಿಗಳು ಕಂಡುಹಿಡಿದಿದ್ದಾರೆ. ಈ ವಾಹನಕ್ಕೆ ಅಮೆರಿಕದಲ್ಲಿ ನಡೆದ ಸರ್ಧೆಯಲ್ಲಿ ಬಹುಮಾನ ಲಭಿಸಿದೆ.
ಇನ್ನು ಈ ವಿದ್ಯಾರ್ಥಿಗಳು ಕಂಡು ಹಿಡಿದಿರುವ ರಕ್ಷಕ್ ಮಾರ್ಸ್ ರೋವರ್ ವೆಹಿಕಲ್ ಸ್ಪೇಸ್ ಅಂಡ್ ರೋಬೋಟಿಕ್ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಬಹುಮಾನ ಗಿಟ್ಟಿಸಿದೆ. ಒಟ್ಟಾರೆ ಈ ವಿದ್ಯಾರ್ಥಿಗಳು ಆವಿಷ್ಕಾರಗಳಲ್ಲಿ ತೊಡಗಿಕೊಂಡು ಕೀರ್ತಿ ಪತಾಕೆ ಹಾರಿಸಿದ್ದಾರೆ ಎಂದು ಪಾಂಶುಪಾಲರು ಮೆಚ್ಚುಗೆ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಾಂಶುಪಾಲ ಬಿ.ಷಡಕ್ಷರಪ್ಪ , ಆಡಳಿತ ಮಂಡಳಿಯ ಡಾ.ಆರ್.ಅರುಣ್‍ಕುಮಾರ್, ಟ್ರಸ್ಟಿ ಕೆ.ಪಟೇಲ್, ಲಿಯೋ, ಡಾ.ಶಿವಶಕ್ತಿ ಬಾಲನ್ ಉಪಸ್ಥಿತರಿದ್ದರು.