ರಾಷ್ಟ್ರೀಯ ಹೆದ್ದಾರಿಗೆ ಕೇಂದ್ರದಿಂದ ಹಣ ಬಿಡುಗಡೆ ಮಾಡಿಸುವುದು ನಮ್ಮ ಜವಾಬ್ದಾರಿ- ಈಶ್ವರಪ್ಪ

 

ಬೆಂಗಳೂರು, ಜು.4- ಕೇಂದ್ರ ಸರ್ಕಾರ ಸಿಆರ್‍ಎಫ್ ನಿಧಿ ಅಡಿಯಲ್ಲಿ 7ಸಾವಿರ ಕೋಟಿ ರೂ. ಮಂಜೂರು ಮಾಡಿದ್ದರೂ ಪ್ರತಿ ವರ್ಷ 500 ಕೋಟಿ ಮಾತ್ರ ಹಣ ಬಿಡುಗಡೆ ಮಾಡತ್ತ್ತಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ವಿಧಾನಸಭೆಗೆ ತಿಳಿಸಿದರು.
ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವ ಕುರಿತು ಬಿಜೆಪಿ ಶಾಸಕ ಗೋವಿಂದಕಾರಜೋಳ ಅವರು ಮಾತನಾಡುತ್ತಿದ್ದಾಗ ಮಧ್ಯ ಪ್ರವೇಶಿಸಿ ಮಾತನಾಡಿದ ಅವರು, ಸಿಆರ್‍ಎಫ್ ನಿಧಿ ಅಡಿ ಹಣ ರಾಜ್ಯಕ್ಕೆ ಬರಲು 14 ವರ್ಷಗಳು ಬೇಕಾಗುತ್ತದೆ. ಈಗಾಗಲೇ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದಂತೆ 2500ಸಾವಿರ ಕೋಟಿ ರೂ.ಗಳಿಗೆ ಕಾರ್ಯಾದೇಶವಾಗಿದೆ. 496ಕೋಟಿ ರೂ. ಬಿಲ್ ಬಾಕಿ ಉಳಿದಿದೆ ಎಂದು ಸದನದ ಗಮನಕ್ಕೆ ತಂದರು.
ಕೇಂದ್ರ ಸರ್ಕಾರದ ಬಳಿಗೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ನೇತೃತ್ವದಲ್ಲಿ ಒಂದು ನಿಯೋಗ ಕೊಂಡೊಯ್ಯಲು ಸಿದ್ಧವಿರುವುದಾಗಿ ಹೇಳಿದರು.
ರೇವಣ್ಣ ಅವರ ಮಾತನ್ನು ಬೆಂಬಲಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ವಾರ್ಷಿಕ 500 ಕೋಟಿ ಹಣ ಬಿಡುಗಡೆ ಮಾಡಿದರೆ ಸಿಆರ್‍ಎಫ್ ನಿಧಿ ಹಣವನ್ನು ಕೇಂದ್ರ ಸರ್ಕಾರ 14 ವರ್ಷಗಳ ವರೆಗೆ ಕೊಡುತ್ತದೆ ಎಂದು ಹೇಳಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ಶಾಸಕರಾದ ಅರವಿಂದ ಲಿಂಬಾವಳಿ, ಬಸವರಾಜಬೊಮ್ಮಾಯಿ, ಸಿ.ಎಂ.ಉದಾಸಿ, ಎಂ.ಪಿ.ರೇಣುಕಾಚಾರ್ಯ ಮೊದಲಾದವರು, ರಾಷ್ಟ್ರೀಯ ಹೆದ್ದಾರಿಗೆ ಎಷ್ಟು ಹಣ ಮಂಜೂರಾಗಿದೆ ಎಂಬದನ್ನು ಹೇಳಬೇಕು. ಕೇಂದ್ರ ಸರ್ಕಾರ ಒಮ್ಮೆ ಮಂಜೂರಾದ ಮೇಲೆ ಹಣ ಬಿಡುಗಡೆ ಮಾಡಲಿದೆ ಎಂದರು.

ಬಿಜೆಪಿಯ ಈಶ್ವರಪ್ಪ ಮಾತನಾಡಿ, ಈ ಹಿಂದಿನ ಸರ್ಕಾರದಲ್ಲಿದ್ದ ಲೋಕೋಪಯೋಗಿ ಸಚಿವರು  ರಾಷ್ಟ್ರೀಯ ಹೆದ್ದಾರಿಗಳ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ಅಭಿನಂದಿಸುತ್ತಿದ್ದರು. ರಾಷ್ಟ್ರೀಯ ಹೆದ್ದಾರಿಗೆ ಎಷ್ಟು ಹಣ ಮಂಜೂರಾಗಿದೆ ಎಂಬುದನ್ನು ಹೇಳಬೇಕು.  ಅಗತ್ಯ ಬಿದ್ದರೆ ಕೇಂದ್ರಕ್ಕೆ ನಿಯೋಗ ಕೊಂಡೊಯ್ಯಿರಿ, ಕೇಂದ್ರದಿಂದ ಹಣ ಬಿಡುಗಡೆ ಮಾಡಿಸುವುದು ನಮ್ಮದು ಎಂದು ಹೇಳಿದರು.

ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷರು, ತಮ್ಮ ಕ್ಷೇತ್ರದಲ್ಲಿ ಸಿಆರ್‍ಎಫ್ ನಿಧಿಯಡಿ 19 ಕೋಟಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅನಂತ್‍ಕುಮಾರ್, ನಿತಿನ್‍ಗಡ್ಕರಿ ಸೇರಿದಂತೆ ಹಲವರನ್ನು ಸಂಪರ್ಕ ಮಾಡಿದರೂ ಕೂಡ ಅನುದಾನ ಸಿಗಲಿಲ್ಲ. ದೆಹಲಿಯಲ್ಲಿ ಅನುದಾನ ತರುವುದು ಒಂದು ಕಲೆ. ಅದು ಕೆಲವರಿಗೆ ಮಾತ್ರ ಸಿದ್ದಿಸಿರುತ್ತದೆ ಎಂದರು.

ಆಗ ಬಿಜೆಪಿ ಸದಸ್ಯರು ಅನುದಾನ ತರುವುದು ರೇವಣ್ಣ ಅವರಿಗೆ ಗೊತ್ತಿದೆ ಎಂದು ಛೇಡಿಸಿದಾಗ, ಮಾತು ಮುಂದುವರೆಸಿದ ಸಭಾಧ್ಯಕ್ಷರು, ರೇವಣ್ಣ ಅವರಿಗೆ ಇಲಾಖೆ ಬಗ್ಗೆ  ಶ್ರದ್ಧೆ ಇದೆ. ಅವರು ಪಟ್ಟು ಬಿಡೆದೆ ಕೆಲಸ ಮಾಡುತ್ತಾರೆ. ಶಾಸಕರು ಸಾರ್ವಜನಿಕರನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಸಭಾಧ್ಯಕ್ಷರ ಬಗ್ಗೆ ಕರುಣೆ ಇರಲಿ ಎಂದು ಹೇಳಿದರು.
ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಕೇಂದ್ರ ಸರ್ಕಾರ ಮಂಜೂರು ಮಾಡಿದರೆ ಶೇ.100ರಷ್ಟು ಹಣ ಬಿಡುಗಡೆ ಮಾಡುವುದಿಲ್ಲ ಎಂದು ಆಕ್ಷೇಪಿಸುತ್ತೀರಿ, ರಾಜ್ಯ ಸರ್ಕಾರವೂ ಕೂಡ ರಸ್ತೆ ಕಾಮಗಾರಿಗಳಿಗೆ ಮೂರನೇ ಒಂದರಷ್ಟು ಹಣ ಬಿಡುಗಡೆ ಮಾಡುತ್ತದೆ ಎಂದು ತಿರುಗೇಟು ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ