
ಬೆಂಗಳೂರು, ಜು.4- ವೀರಶೈವ ಲಿಂಗಾಯಿತ ಧರ್ಮದ ವಿಚಾರ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿ, ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಕಾವೇರಿದ ಧ್ವನಿಯಲ್ಲಿ ಮಾತಿನ ಚಕಮಕಿ ನಡೆಯಿತು.
ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವ ಕುರಿತು ಬಿಜೆಪಿ ಶಾಸಕ ರಾಜ್‍ಕುಮಾರ್ ಪಾಟೀಲ್ ಮಾತನಾಡುತ್ತಾ, ಬಸವಣ್ಣ ಅವರು ಸಮಾಜ ಒಡೆಯುವುದಾಗಿ ಹೇಳಿಲ್ಲ. ಆದರೆ, ರಾಜಕೀಯಕ್ಕಾಗಿ ಸಮಾಜ ಒಡೆಯುವ ಕೆಲಸ ಮಾಡಲಾಗಿದೆ ಎಂದು ಹೇಳಿದ್ದು, ಉಭಯ ಪಕ್ಷಗಳ ಶಾಸಕರ ನಡುವೆ ಮಾತಿನ ಚಕಮಕಿಗೆ ಗ್ರಾಸವಾಯಿತು.
ಮಧ್ಯ ಪ್ರವೇಶಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಅವರು, ಪ್ರತ್ಯೇಕ ಲಿಂಗಾಯಿತ ಧರ್ಮ ಆಗಬೇಕೆಂಬ ಬಗ್ಗೆ ನಿಮ್ಮ ನಾಯಕರು ಮನವಿ ಪತ್ರಕೊಟ್ಟಿದ್ದರು. ನೋಡಿಕೊಂಡು ಮಾತನಾಡಿ ಎಂದರು.
ಜನತಾದಳ, ಕಾಂಗ್ರೆಸ್, ಬಿಜೆಪಿಯ ನಾಯಕರು ಪ್ರಧಾನಿಯಾಗಿದ್ದ ಮನಮೋಹನ್‍ಸಿಂಗ್ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ಮನವಿ ಪತ್ರ ಕೊಟ್ಟಿದ್ದರು ಎಂದು ಹೇಳಿದರು.
ಆಗ ಬಿಜೆಪಿ ಶಾಸಕ ಎ.ಎಸ್.ಪಾಟೀಲ್‍ನಡಹಳ್ಳಿ ಅವರು, ಸಮಾಜ ಒಡೆಯಿರಿ ಎಂದು ಯಾರೂ ಮನವಿ ಕೊಟ್ಟಿಲ್ಲ. ಜನ ನಿಮಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಾಠ ಕಲಿಸಿದ್ದಾರೆ. ಲಿಂಗಾಯಿತರ ಬಗ್ಗೆ ಹಗುರವಾಗಿ ಮಾತನಾಡಬೇಡಿ, ಹುಷಾರಾಗಿರಿ ಎಂದು ತಿರುಗೇಟು ನೀಡಿದರು. ಪ್ರತಿಯಾಗಿ ಡಿ.ಕೆ.ಶಿವಕುಮಾರ್ ಕೂಡ, ಈ ವಿಚಾರದಲ್ಲಿ ಚರ್ಚೆಯಾಗಬೇಕು. ಯಾರು ಮನವಿ ಕೊಟ್ಟಿದ್ದರು, ಯಾರು ಸಮಾಜ ಒಡೆದಿದ್ದಾರೆ ಎಂಬ ಬಗ್ಗೆ ಚರ್ಚೆಯಾಗಬೇಕು ಎಂದು ಏರಿದ ಧ್ವನಿಯಲ್ಲಿ ಮಾತನಾಡಿದರು.
ಆಗ ಬಸವನಗೌಡ ಯತ್ನಾಳ್, ಎಂ.ಪಿ.ರೇಣುಕಾಚಾರ್ಯ, ಬಸವರಾಜಬೊಮ್ಮಾಯಿ ಅವರು ಏರಿದ ಧ್ವನಿಯಲ್ಲಿ ಮಾತನಾಡಲು ಮುಂದಾದರು.
ಪ್ರತಿಯಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹಮ್ಮದ್‍ಖಾನ್, ಸಮಾಜ ಹೊಡೆಯುವ ಕೆಲಸ ನೀವು ಮಾಡಿರುವುದು ಎಂದು ಛೇಡಿಸಿದರು.
ಆಡಳಿತ ಪಕ್ಷದ ಹಲವು ಸದಸ್ಯರು ಎದ್ದು ನಿಂತು ಬಿಜೆಪಿ ಮಾಡಿದ ಆಕ್ಷೇಪಕ್ಕೆ ಪ್ರತಿರೋಧ ವ್ಯಕ್ತಪಡಿಸಲು ಮುಂದಾದರು. ಅಷ್ಟರಲ್ಲಿ ಮಧ್ಯ ಪ್ರವೇಶ ಮಾಡಿದ ಸಭಾಧ್ಯಕ್ಷ ರಮೇಶ್‍ಕುಮಾರ್, ಯಾರು ಸಮಾಜ ಒಡೆದರು, ಯಾರು ಸೋತರು ಎಲ್ಲವೂ ಗೊತ್ತಾಗಿದೆ. ಸದನದಲ್ಲಿ ಕುಸ್ತಿಯಾಡುವ ರೀತಿ ವರ್ತಿಸಬಾರದು. ಜನರು ಗಮನಿಸುತ್ತಾರೆ. ಜನರಿಗೆ ಹೆದರಿ ಭಕ್ತಿಯಿಂದ ನಡೆದುಕೊಳ್ಳಬೇಕೆಂದು ಸಲಹೆ ಮಾಡಿದಾಗ, ಕಾಂಗ್ರೆಸ್-ಬಜೆಪಿ ಸದಸ್ಯರ ನಡುವಿನ ವಾಗ್ವಾದಕ್ಕೆ ತೆರೆ ಬಿದ್ದಿತು.