ಬೆಂಗಳೂರು, ಜು.3- ಬಲಾಢ್ಯರು ನಕಲಿ ದಾಖಲೆ ಸೃಷ್ಟಿಸಿ ಭೂಗಳ್ಳತನ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ವಿಧಾನಸಭೆಯಲ್ಲಿಂದು ಆರೋಪಿಸಿದರು.
ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದಂತೆ ವಂದನಾರ್ಪಣಾ ಪ್ರಸ್ತಾವ ಅನುಮೋದಿಸುವಂತೆ ಕೋರಿ ಮಾತನಾಡಿದ ಅವರು, ನಕಲಿ ದಾಖಲೆ ಸೃಷ್ಟಿಸಿ ಭೂಗಳ್ಳತನ ಮಾಡುತ್ತಿರುವವರಲ್ಲಿ ರೈತರು, ಬಡವರು, ಗ್ರಾಮೀಣ ಜನರಿಲ್ಲ. ಬದಲಾಗಿ ಬಲಾಢ್ಯರೇ ಹೆಚ್ಚಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಪೆÇಲೀಸ್ ಅಧಿಕಾರಿಯೊಬ್ಬರು ನಿಯಮ ಬಾಹಿರವಾಗಿ ಸರ್ಕಾರದ ಮೇಲೆ ಒತ್ತಡ ತಂದಾಗ ಜಮೀನನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಆದರೆ, ಮುಂದಿನ ಕ್ರಮವೇನು ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪಹಣಿ ಮೇಲೆ ಹೈಕೋರ್ಟ್‍ನ ತಡೆಯಾಜ್ಞೆ ಇದೆ ಎಂದು ಮುದ್ರೆ ಒತ್ತಿಸಲಾಗಿದೆ. ಆದರೆ, ತಡೆಯಾಜ್ಞೆ ಇಲ್ಲ. ನಾಡಿನ ಅನ್ನತಿಂದು ದ್ರೋಹ ಬಗೆದ ಅಧಿಕಾರಿಯ ಎಲ್ಲ ಚಿನ್ನದ ಪದಕ, ಸರ್ಕಾರದ ವಿವಿಧ ಸೌಲತ್ತನ್ನು ವಾಪಸ್ ಪಡೆಯಿರಿ ಎಂದು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸಭೆಯ ಗಮನಕ್ಕೆ ತಂದರು.
ಮೇಲಿನ ಹಂತದಲ್ಲಿ ಸರಿ ಹೋಗದಿದ್ದರೆ ರಾಷ್ಟ್ರಮಟ್ಟದಲ್ಲೂ ಹಾಗೂ ರಾಜ್ಯಮಟ್ಟದಲ್ಲೂ ಯಾವದೂ ಸರಿ ಹೋಗುವುದಿಲ್ಲ ಎಂದು ಕೆಲವು ಸನ್ನಿವೇಶ, ಸಂದರ್ಭಗಳನ್ನು ಉಲ್ಲೇಖಿಸಿ ಮಾತನಾಡಿದರು.