ಪತ್ರಕರ್ತರನ್ನು ಹತ್ಯೆಗೈದ ಪ್ರಕರಣ: ಮೈತ್ರಿ ಪಕ್ಷದ ಶಾಸಕರ ವಿರುದ್ಧ ಪ್ರಕರಣ ದಾಖಲು

ಅಗರ್ತಲ(ತ್ರಿಪುರ), ಜು.3- ಇಬ್ಬರು ಪತ್ರಕರ್ತರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತ್ರಿಪುರದಲ್ಲಿ ಆಡಳಿತಾರೂಢ ಬಿಜೆಪಿಯ ಮೈತ್ರಿ ಪಕ್ಷದ ಇಬ್ಬರು ಶಾಸಕರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಆದರೆ, ಬಿಜೆಪಿಯ ಅಂಗಪಕ್ಷವಾದ ಐಪಿಎಫ್‍ಟಿ ಇದನ್ನು ನಿರಾಕರಿಸಿದ್ದು, ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಶಾಸಕರ ವಿರುದ್ಧ ಸಿಬಿಐ ದೂರು ದಾಖಲಿಸಿದೆ ಎಂದು ಕಿಡಿಕಾರಿದ್ದಾರೆ.
ಐಪಿಎಫ್‍ಟಿ ಪಕ್ಷದ ಶಾಸಕರಾದ ಧೀರೇಂದ್ರ ದೆಬ್ಬರಾಮ, ಅಮಿತ್ ದೆಬ್ಬರಾಮ ಮತ್ತು ಪಕ್ಷದ ಕಾರ್ಯಕಾರಿಣಿ ಸದಸ್ಯ ಬಲರಾಮ ದೆಬ್ಬರಾಮ ಸೇರಿದಂತೆ ಒಟ್ಟು 300 ಮಂದಿ ವಿರುದ್ಧ ಸಿಬಿಐ ದೂರು ದಾಖಲಿಸಿದೆ.
ತ್ರಿಪುರದಲ್ಲಿ ಬಿಜೆಪಿ ಐಪಿಎಫ್‍ಟಿಯೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಸಿದೆ. ಈಗ ಅಂಗ ಪಕ್ಷದ ಶಾಸಕರೇ ಪತ್ರಕರ್ತರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ದೂರು ದಾಖಲಿಸಿಕೊಂಡಿರುವುದು ನುಂಗಲಾರದ ಬಿಸಿ ತುಪ್ಪವಾಗಿದೆ. ಶಾಂತನುಭೌಮಿಕ್ ಮತ್ತು ಸುದೀಪ್ ದತ್ತ ಭೌಮಿಕ್ ಎಂಬ ಇಬ್ಬರು ಪತ್ರಕರ್ತರನ್ನು ಕಳೆದ ವರ್ಷ ನ.21ರಂದು ಹತ್ಯೆಗಯ್ಯಲಾಗಿತ್ತು. ಐಪಿಎಫ್‍ಟಿ ಮತ್ತು ಸಿಪಿಎಂ ಕಾರ್ಯಕರ್ತರ ನಡುವೆ ನಡೆಯುತ್ತಿದ್ದ ಗಲಭೆ ಪ್ರಕರಣವನ್ನು ವರದಿ ಮಾಡಲು ಸ್ಥಳಕ್ಕೆ ಈ ಇಬ್ಬರು ಪತ್ರಕರ್ತರು ಸ್ಥಳಕ್ಕೆ ದಾವಿಸಿದ್ದರು. ಇನ್ನೇನು ಕಚೇರಿಗೆ ತಲುಪಬೇಕು ಎನ್ನುವಷ್ಟರಲ್ಲಿ ಎರಡು ಕಡೆ ಸಂಘಟನೆಗಳ ಗಲಭೆ ತಾರಕ್ಕೇರಿದ್ದರಿಂದ ಶಾಂತನುಭೌಮಿಕ್‍ಗೆ ಗುಂಡು ಹೊಡೆದಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಇನ್ನು ಸುದೀಪ್ ದತ್ತ ಭೌಮಿಕ್ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದರು.
ಈ ಪ್ರಕರಣ ಭಾರೀ ಕೋಲಾಹಲವನ್ನೇ ಸೃಷ್ಟಿಸಿತ್ತು. ಘಟನೆಯನ್ನು ಖುದ್ದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ನಾಯಕರು ತೀವ್ರವಾಗಿ ಖಂಡಿಸಿದ್ದರು. ರಾಜ್ಯಾದ್ಯಂತ ಪ್ರತಿಭಟನೆ ಜೋರಾದ ಹಿನ್ನಲೆಯಲ್ಲಿ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಿತ್ತು. ಕಳೆದ ಜ.29ರಂದು ಸಿಬಿಐ ತನಿಖೆಯನ್ನು ಕೈಗೆತ್ತಿಕೊಂಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ