ಜು.8ರಂದು ದಾದಾ-ಮೊಲ ಬಂಜಾರ ಕಲಾಮೇಳ ಸಮಾವೇಶ

 

ಬೆಂಗಳೂರು, ಜು.3- ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ದಾದಾ-ಮೊಲ ಬಂಜಾರ ಕಲಾಮೇಳ ಸಮಾವೇಶವನ್ನು ಇದೇ 8ರಂದು ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘದ ಅಧ್ಯಕ್ಷೆ ಡಾ.ಬಿ.ಟಿ.ಲಲಿತಾನಾಯಕ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಉದ್ಘಾಟಿಸಲಿದ್ದು, ಶ್ರಮಿಕ ಬಂಜಾರ ಎಂಬ ಸ್ಮರಣ ಸಂಚಿಕೆಯನ್ನು ಸಚಿವ ಡಿ.ಕೆ.ಶಿವಕುಮಾರ್ ಬಿಡುಗಡೆ ಮಾಡಲಿದ್ದಾರೆ ಹಾಗೂ ನಾನು ರಚಿಸಿರುವ ಗ್ರಹಿಕೆ ಗೊಂಚಲು ಎಂಬ ಕೃತಿಯನ್ನು ಸಚಿವ ಪ್ರಿಯಾಂಕ ಖರ್ಗೆ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ಬಂಜಾರ ಜ್ಞಾನ ಚಿಂತಾಮಣಿ ಪ್ರಶಸ್ತಿ ನೀಡಲಾಗುವುದು. ಬಂಜಾರ ಕರಕುಶಲ ವಸ್ತು ಪ್ರದರ್ಶನವನ್ನು ಸಚಿವೆ ಜಯಮಾಲಾ ಉದ್ಘಾಟಿಸಲಿದ್ದು, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಯೋಜನೆಗಳ ಚಲನಚಿತ್ರ ಪ್ರದರ್ಶನಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ಬಂಜಾರ ಭವನಕ್ಕೆ ಅನುದಾನ ನೀಡಿ ಸಹಕರಿಸಿದ ಲೋಕಸಭಾ ಸದಸ್ಯ ಪಿ.ಸಿ.ಮೋಹನ್ ಅವರಿಗೆ ಸಂಘದಿಂದ ಕೃತಜ್ಞತಾ ಪೂರ್ವಕ ಗೌರವ ಸಲ್ಲಿಸಲಾಗುವುದು. ತಾಂಡಾಗಳ ವಲಸೆ ಪ್ರಕರಣ, ಅರಣ್ಯ ಪ್ರದೇಶದಲ್ಲಿ ವಾಸಿಸುವ ಆದಿವಾಸಿಗಳಿಗೆ ಭದ್ರತೆ ಒದಗಿಸುವುದು, ಅಪೂರ್ಣವಾಗಿರುವ ಕಂದಾಯ ಗ್ರಾಮಗಳು ಸೇರಿದಂತೆ ಕೆಲವು ವಿಷಯಗಳ ಮೇಲೆ ಸಮಾವೇಶದಲ್ಲಿ ಚರ್ಚೆ ನಡೆಸಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ