ಪಡಿತರ ವಿತರಕರ ಸಂಘದ ಬೇಡಿಕೆಗಳ ಈಡೇರಿಕೆಗೆ ಒತ್ತಾಯ

 

ಬೆಂಗಳೂರು, ಜು.3- ಕಳೆದ ಹಲವು ದಿನಗಳಿಂದ ಬಾಕಿ ಇರುವ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಬೇಡಿಕೆಗಳನ್ನು ಈಡೇರಿಸಬೇಕೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಒತ್ತಾಯಿಸಲಾಗಿದೆ.
ಗೃಹ ಕಚೇರಿ ಕೃಷ್ಣಾದಲ್ಲಿಂದು ಸರ್ಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ ಡಿ.ಕೃಷ್ಣಪ್ಪ ನೇತೃತ್ವದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಪದಾಧಿಕಾರಿಗಳು ಮುಖ್ಯಮಂತ್ರಿಯವರನ್ನು ಖುದ್ದು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು.
ಹಿಂದಿನ ಸರ್ಕಾರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿತ್ತಾದರೂ ಅದು ಕಾಗದದ ಮೇಲೆ ಉಳಿದಿದೆ. ಈಗಿನ ಸರ್ಕಾರವಾದರೂ ನಮ್ಮ ಬೇಡಿಕೆಯನ್ನು ಮಾನವೀಯತೆಯಿಂದ ಪರಿಗಣಿಸಿ ಶೀಘ್ರದಲ್ಲೇ ಅನುಷ್ಠಾನ ಮಾಡಬೇಕೆಂದು ನಿಯೋಗ ಮುಖ್ಯಮಂತ್ರಿಯವರಿಗೆ ಕೋರಿತು.
ಸಂಘದ ಬೇಡಿಕೆಗಳನ್ನು ಸಹನೆಯಿಂದಲೇ ಆಲಿಸಿದ ಕುಮಾರಸ್ವಾಮಿ ಅವರು ಈ ಸಂಬಂಧ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವರು ಮತ್ತು ಇಲಾಖೆಯ ಅಧಿಕಾರಿಗಳ ಜತೆ ಶೀಘ್ರದಲ್ಲೇ ಸಭೆ ಕರೆದು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ.
ಆರ್ಥಿಕ ಇತಿಮಿತಿಯೊಳಗೆ ಸಂಘದ ಬೇಡಿಕೆಗಳನ್ನು ಈಡೇರಿಸಲಾಗುವುದು. ಹಿಂದಿನ ಸರ್ಕಾರದಲ್ಲಿ ಏನು ಆಗಿತ್ತೆಂಬುದು ಮುಖ್ಯವಲ್ಲ, ನಮ್ಮ ಸರ್ಕಾರದ ಅವಧಿಯಲ್ಲಿ ನಿಮ್ಮ ಬೇಡಿಕೆಗಳನ್ನು ಆದಷ್ಟು ಬೇಗ ಈಡೇರಿಸುತ್ತೇನೆ ಎಂದು ವಾಗ್ದಾನ ಮಾಡಿದ್ದಾರೆ.
ಬೇಡಿಕೆಗಳೇನು? ಪಡಿತರ ಸಂಘ ಮುಂದಿಟ್ಟಿರುವ ಬೇಡಿಕೆಗಳೆಂದರೆ ಈಗಾಗಲೇ ಕಳೆದ ಬಜೆಟ್‍ನಲ್ಲಿ ಅನುಮೋದನೆಗೊಂಡ ಕ್ವಿಂಟಾಲ್‍ಗೆ 13ರೂ. ಕಮಿಷನ್ ಬಿಡುಗಡೆ ಮಾಡುವುದು, ಕಳೆದ ಏಪ್ರಿಲ್‍ನಿಂದ ಬಾಕಿ ಇರುವ ಹಣವನ್ನು ತಕ್ಷಣವೇ ಪಾವತಿಸುವುದು, ಬೇರೆ ರಾಜ್ಯಗಳಲ್ಲಿ ಕ್ವಿಂಟಾಲ್‍ಗೆ ನೀಡುತ್ತಿರುವ 150 ರಿಂದ 200ರೂ. ಕಮಿಷನ್ ಹಣವನ್ನು ನೀಡುವುದು, ರಾಜ್ಯಾದ್ಯಂತ ಟೆಂಡರ್ ಮೂಲಕ ಆಹಾರ ಪದಾರ್ಥಗಳನ್ನು ವಿತರಣೆ ಮಾಡಬೇಕೆಂದು ಕೃಷ್ಣಪ್ಪ ಮನವಿ ಮಾಡಿದ್ದಾರೆ.
ರಾಜ್ಯದ ಎಲ್ಲ ನ್ಯಾಯಬೆಲೆ ಅಂಗಡಿಗಳಿಗೆ ಗಣಕೀಕೃತ ಯಂತ್ರಗಳನ್ನು ಅಳವಡಿಸಲಾಗಿದೆ. ಇದೇ ರೀತಿ ನೆಟ್‍ವರ್ಕ್ ಇಲ್ಲದ ಕಡೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು. ಬಯೋ ಮೆಟ್ರಿಕ್ ಯಂತ್ರ, ಎಲೆಕ್ಟ್ರಾನಿಕ್ ತೂಕದ ಯಂತ್ರಗಳನ್ನು ಸಗಟು ಮಳಿಗೆಗಳಿಗೆ ಅಳವಡಿಸಿ ಮಾಲೀಕರಿಗೆ ಕೊಡಿಸಬೇಕೆಂದು ಕೋರಿದ್ದಾರೆ.
ವಿತರಕರ ಸಂಘದ ಪದಾಧಿಕಾರಿಗಳು ಆರ್ಥಿಕವಾಗಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುವುದರಿಂದ ಸರ್ಕಾರ ಬೇಡಿಕೆಯನ್ನು ಕಾಲಮಿತಿಯೊಳಗೆ ಈಡೇರಿಸುವಂತೆ ಒತ್ತಾಯಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ