ಬೆಂಗಳೂರು:ಜು-3: 2010ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಉಗ್ರರು ತಪ್ಪೊಪ್ಪಿಗೆ ಹೇಳಿಕೆ ನೀಡಲು ನಿರ್ಧರಿಸಿದ್ದಾರೆ.
ಸಿಟಿ ಸಿವಿಲ್ ಕೋರ್ಟ್ನ ಹಾಲ್ ನಂಬರ್ 50 ರಲ್ಲಿ ನಡೆದ ವಿಚಾರಣೆಗೆ ಇಂಡಿಯನ್ ಮುಜಾಯಿದ್ದೀನ್ ಉಗ್ರ ಸಂಘಟನೆಗೆ ಸೇರಿದ ಆರು ಉಗ್ರರು ಹಾಜರಾಗಿದ್ದರು. ಪ್ರಮುಖ ಆರೋಪಿ ಯಾಸಿನ್ ಭಟ್ಕಳ್ ತಿಹಾರ್ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದ. ಗೋಹದ್ ಅಜೀಜ್ ಕೋಮನಿ, ಮಹಮದ್ ಕಫೀಲ್ ಅಖ್ತರ್, ಹಮಲ್ ಹಸನ್ ಸೇರಿ ಆರು ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದರು.
ನ್ಯಾಯಾಧೀಶರಾದ ಸಿದ್ದಲಿಂಗ ಪ್ರಭು ಅವರ ಪೀಠದಲ್ಲಿ ವಿಚಾರಣೆ ನಡೆಯಿತು. ವಿಚಾರಣೆ ವೇಳೆ ಮೂವರು ಆರೋಪಿಗಳು ಕೃತ್ಯದಲ್ಲಿ ಭಾಗಿಯಾದ ಬಗ್ಗೆ ಕೋರ್ಟ್ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಲು ನ್ಯಾಯಾಧೀಶರ ಸಮ್ಮುಖದಲ್ಲಿ ಒಪ್ಪಿಕೊಂಡಿದ್ದಾರೆ. ಆದರೆ ಇನ್ನು ಮೂವರು ಆರೋಪಿಗಳು ತಪ್ಪೊಪ್ಪಿಕೊಳ್ಳಲು ನಿರಾಕರಿಸಿದ್ದಾರೆ.
ತಿಹಾರ್ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದ ಯಾಸಿನ್ ಭಟ್ಕಳ್ ಕೂಡ ತಪ್ಪೊಪ್ಪಿಗೆ ಹೇಳಿಕೆ ನೀಡಲು ನಿರಾಕರಿಸಿದ್ದಾನೆ. ಗೋಹದ್ ಅಜೀಜ್ ಕೋಮನಿ, ಮಹಮದ್ ಕಫೀಲ್ ಅಖ್ತರ್ ಮತ್ತು ಕಮಲ್ ಹಸನ್ ತಪ್ಪೊಪ್ಪಿಗೆ ಹೇಳಿಕೆ ನೀಡಲು ಒಪ್ಪಿಕೊಂಡಿದ್ದಾರೆ.
ಜಿಹಾದ್ ಹೆಸರಿನಲ್ಲಿ ಬಾಂಬ್ ಸ್ಫೋಟಕ್ಕೆ ಸಹಕಾರ ನೀಡುವಂತೆ ಪ್ರೇರೇಪಿಸಲಾಗಿತ್ತು. ಬಂಧನಕ್ಕೊಳಗಾಗಿ ಆರು ವರ್ಷವಾಗಿದ್ದು, ನಮಗೆ ಕೃತ್ಯ ನಡೆಸಿದ್ದರ ಬಗ್ಗೆ ಪಶ್ಚಾತಾಪ ಇದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಲು ಸಿದ್ಧ ಎಂದು ಆರೋಪಿಗಳು ನ್ಯಾಯಾಧೀಶರ ಮುಂದೆ ಹೇಳಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ನಾಳೆ ತಪ್ಪೊಪ್ಪಿಗೆ ಹೇಳಿಕೆ ನೀಡಲು ದಿನ ನಿಗದಿ ಮಾಡಿದ ಕೋರ್ಟ್, ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
2010ರ ಏಪ್ರಿಲ್ 17 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಮೂರು ಬಾಂಬ್ ಸ್ಫೋಟಗೊಂಡಿದ್ದವು. ಪ್ರಕರಣದಲ್ಲಿ ಇಂಡಿಯನ್ ಮುಜಾಯಿದ್ದೀನ್ ಸಂಘಟನೆ ಪಾತ್ರ ಇದೆ ಎಂಬುದು ಅಂದಿನ ಎಸಿಪಿ ನ್ಯಾಮಗೌಡರ ತನಿಖೆಯಲ್ಲಿ ಬಯಲಾಗಿತ್ತು. ಆರು ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು, ಯಾಸಿನ್ ಭಟ್ಕಳ್ನನ್ನೂ ವಿಚಾರಣೆಗೊಳಪಡಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಕ್ತಾಯಗೊಳಿಸಿ ಸಿಸಿಬಿ ಅಧಿಕಾರಿಗಳು ಕೋರ್ಟ್ನಲ್ಲಿ ಚಾರ್ಜ್ಶೀಟ್ ದಾಖಲಿಸಿದ್ದರು.
Chinnaswamy stadium bomb blast Case,Three accused, confession






