ಒತ್ತುವರಿಯಾಗಿರುವ ಕೆರೆಗಳನ್ನು ಮುಲಾಜಿಲ್ಲದೆ ತೆರವುಗೊಳಿಸಲಾಗುವುದು: ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು

 

ಬೆಂಗಳೂರು, ಜು.3-ರಾಜ್ಯಾದ್ಯಂತ ಒತ್ತುವರಿಯಾಗಿರುವ ಕೆರೆಗಳನ್ನು ಮುಲಾಜಿಲ್ಲದೆ ತೆರವುಗೊಳಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ವಿಧಾನಪರಿಷತ್‍ನಲ್ಲಿ ಹೇಳಿದರು.

ಕಲಾಪದಲ್ಲಿಂದು ಜೆಡಿಎಸ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಗಮನ ಸೆಳೆಯುವ ಸೂಚನೆಯಡಿ ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿದ ಸಚಿವರು, ಗ್ರಾಮ ಪಂಚಾಯ್ತಿಯಿಂದ ಹಿಡಿದು ಮಹಾನಗರ ಪಾಲಿಕೆವರೆಗೆ ರಾಜ್ಯದಲ್ಲಿ ಒಟ್ಟು 29,636 ಕೆರೆಗಳು ಇದ್ದು, ಕೆರೆ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ರಾಜ್ಯಮಟ್ಟದ ಅಧಿಕಾರಿಯನ್ನು ನೇಮಿಸಲಾಗಿದೆ. ಒತ್ತುವರಿಯಾಗಿರುವುದನ್ನು ಮುಲಾಜಿಲ್ಲದೆ ತೆರವುಗೊಳಿಸಲು ಸೂಚಿಸಲಾಗಿದೆ ಹೇಳಿದರು.
ರೈತರಿಗೆ ಬೆನ್ನೆಲುಬಾಗಿರುವ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸಕಾರರ ಬದ್ಧವಾಗಿದೆ. ಇಲಾಖೆಯಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಕೆರೆಗಳನ್ನು ಸಂರಕ್ಷಣೆ ಮಾಡಲಾಗುವುದು ಎಂದು ತಿಳಿಸಿದರು.

ನಮ್ಮ ಇಲಾಖೆಯಲ್ಲಿ ಹಣದ ಕೊರತೆ ಇಲ್ಲ. ರೈತ ಸಂಜೀವಿನಿ ಯೋಜನೆಯನ್ನು ಸದುಪಯೋಗಪಡಿಸಿಕೊಂಡು ಹೂಳೆತ್ತುವ ಕಾಮಗಾರಿ ಮೂಲಕ ಬರುವ ಫಲವತ್ತತೆಯ ಮಣ್ಣನ್ನು ರೈತರು ತಮ್ಮ ಜಮೀನುಗಳಿಗೆ ಹಾಕಿಸಿಕೊಂಡು ಉತ್ತಮ ಫಸಲು ಪಡೆಯಬಹುದು. ಇದಕ್ಕೆ ಅಗತ್ಯ ಅನುದಾನವನ್ನು ನೀಡಲಾಗುವುದು ಎಂದು ಪುಟ್ಟರಾಜು ಹೇಳಿದರು.

ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯಲ್ಲಿ ನಡೆದಿರುವ 30 ಕೋಟಿ ರೂ. ಅವ್ಯವಹಾರ ಸಂಬಂಧ 28ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಅವರನ್ನು ರಕ್ಷಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡುವುದಿಲ್ಲ. ಕಾನೂನು ಪ್ರಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶರಣಪ್ಪ ಮಟ್ಟೂರು ಅವರ ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ