ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಮೊದಲ ಸಭೆ

ನವದೆಹಲಿ,ಜು.2-ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ರಚನೆಯಾಗಿರುವ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಮೊದಲ ಸಭೆ ಇಂದು ನಡೆಯಿತು. ನವದೆಹಲಿಯ ಜಲ ಆಯೋಗದ ಕೇಂದ್ರ ಕಚೇರಿಯಲ್ಲಿ ಕೇಂದ್ರ ಜಲ ಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥ ಎಂ.ಮಸೂದ್ ಹುಸೇನ್ ನೇತೃತ್ವದಲ್ಲಿ ಸಭೆ ಜರುಗಿತು.
ಕರ್ನಾಟಕದಿಂದ ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ಕಾವೇರಿ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರಸನ್ನ, ತಮಿಳುನಾಡಿನ ನೀರಾವರಿ ಇಲಾಖೆಯ ಕಾರ್ಯದರ್ಶಿ ಎಸ್.ಕೆ.ಪ್ರಭಾಕರ್, ಕೇರಳದಿಂದ ಟಿಂಬು ಬಿಸ್ವಾಲ್ ಹಾಗೂ ಪಾಂಡಿಚೇರಿಯಿಂದ ಎ.ಅನ್ಬರಸು ಮತ್ತು ಕೇಂದ್ರದಿಂದ ಐದು ಮಂದಿ ಪ್ರತಿನಿಧಿಗಳು ಭಾಗವಹಿಸಿದ್ದರು.
ಸಭೆಯಲ್ಲಿ ಪ್ರಮುಖವಾಗಿ ಸುಪ್ರೀಂಕೋರ್ಟ್ ನಿರ್ದೇಶನದಂತೆ ಕಾವೇರಿ ಜಲಾನಯನದ ತೀರಾ ಪ್ರದೇಶಗಳಾದ ಕರ್ನಾಟಕ, ತಮಿಳುನಾಡು, ಪಾಂಡೇಚರಿ ಮತ್ತು ಕೇರಳ ರಾಜ್ಯಗಳಿಗೆ ನೀರು ಹರಿಸುವ ಬಗ್ಗೆ ಚರ್ಚೆ ಮಾಡಲಾಯಿತು. ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳನ್ನು ಗಮನದಲ್ಲಿಟ್ಟುಕೊಂಡು ಕಾವೇರಿ ಕೊಳ್ಳದ ಜಲಾಶಯಗಳಾದ ಕೆಆರ್‍ಎಸ್‍ಎಸ್, ಕಬಿನಿ, ಹಾರಂಗಿ ಮತ್ತು ಹೇಮಾವತಿ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನ ಸಾಮಥ್ರ್ಯದ ಮೇಲೆ ನೀರು ಹರಿಸುವ ಬಗ್ಗೆ ಮಾತುಕತೆ ನಡೆದಿದೆ.
ಕರ್ನಾಟಕದಿಂದ ಸಭೆಯಲ್ಲಿ ಹಾಜರಿದ್ದ ನೀರಾವರಿ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ಕಾವೇರಿ ನದಿ ನೀರು ಪ್ರಾಧಿಕಾರ ಮಾಡಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ಕರ್ನಾಟಕದ ವಾದವನ್ನು ಆಲಿಸದೆ ಏಕಪಕ್ಷೀಯವಾಗಿ ಪ್ರಾಧಿಕಾರ ಮತ್ತು ಸಮಿತಿಯನ್ನು ರಚನೆ ಮಾಡಿದೆ. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಮೂಲ ಧಾವೆ ಸಲ್ಲಿಸಲು ರಾಜ್ಯ ಸರ್ಕಾರ ಸಲ್ಲಿಸಿದೆ. ಹೀಗಾಗಿ ಈ ಹಂತದಲ್ಲಿ ಯಾವುದೇ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಬಾರದೆಂದು ಮನವಿ ಮಾಡಿದರು.
ಪ್ರತಿ 10 ದಿನಗಳಿಗೊಮ್ಮೆ ಜಲಾಶಯಗಳಿಗೆ ಭೇಟಿ ನೀಡಿ ನೀರನ್ನು ಪರಿಶೀಲಿಸುವುದು, ರೈತರಿಗೆ ಇಂತಹ ಬೆಳೆಗಳನ್ನು ಬೆಳೆಯಬೇಕೆಂದು ನಿರ್ದೇಶನ ನೀಡುವುದಕ್ಕೆ ನಮ್ಮ ಆಕ್ಷೇಪವಿದೆ. ನ್ಯಾಯಾಲಯದಲ್ಲಿ ಇದು ಇತ್ಯರ್ಥವಾಗುವವರೆಗೂ ಯಾವುದೇ ರೀತಿಯ ಪ್ರಮುಖ ತೀರ್ಮಾನ ಕೈಗೊಳ್ಳದಂತೆ ರಾಕೇಶ್ ಸಿಂಗ್ ಕೋರಿದರು. ಇತ್ತೀಚೆಗೆ ರಾಜ್ಯ ಸರ್ಕಾರದ ಮನವಿಯನ್ನು ಪರಿಗಣಿಸದೆ ಕೇಂದ್ರ ಸರ್ಕಾರ ಕಾವೇರಿ ನದಿ ನೀರು ಪ್ರಾಧಿಕಾರ ಮತ್ತು ಸಮಿತಿಯನ್ನು ರಚಿಸಿ ಅಧಿಸೂಚನೆ ಹೊರಡಿಸಿತ್ತು.
ರಾಜ್ಯ ಸರ್ಕಾರ ಕೇಂದ್ರದ ಈ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆಯನ್ನು ಸಹ ನಡೆಸಿತ್ತು. ಇತ್ತೀಚೆಗೆ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ಕಾನೂನು ಹೋರಾಟ, ಸಂಸತ್‍ನ ಉಭಯ ಸದನಗಳಾದ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಚರ್ಚಿಸುವುದು ಮತ್ತು ಸುಪ್ರೀಂಕೋರ್ಟ್‍ನಲ್ಲಿ ಮೂಲ ಧಾವೆ ಹಾಕಿ ಕಾನೂನು ಹೋರಾಟ ನಡೆಸುವುದಾಗಿಯೂ ತೀರ್ಮಾನಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ