ಬಹುಪತ್ನಿತ್ವ ಮತ್ತು ನಿಖಾ ನಿಷೇಧಿಸುವ ಅರ್ಜಿಯನ್ನು ವಿಚಾರಣೆ: ಸುಪ್ರೀಂಕೋರ್ಟ್

ನವದೆಹಲಿ,ಜು.2- ಮುಸ್ಲಿಂ ಧರ್ಮದಲ್ಲಿ ಆಚರಣೆಯಲ್ಲಿರುವ ಬಹುಪತ್ನಿತ್ವ ಮತ್ತು ನಿಖಾ ಹಲಾಲ ನಿಷೇಧಿಸುವ ಕುರಿತು ತುರ್ತು ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಸೂಚಿಸಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರ, ಎ.ಎಂ.ಖನ್ವೀಲ್‍ಕರ್ ಹಾಗೂ ಚಂದ್ರಚೂಡ್ ಅವರನ್ನೊಳಗೊಂಡ ಪಂಚ ಪೀಠ ತುರ್ತು ವಿಚಾರಣೆ ನಡೆಸಲು ಒಪ್ಪಿಕೊಂಡಿದೆ.
ಹಿರಿಯ ವಕೀಲ ವಿ.ಶೇಖರ್ ಸಲ್ಲಿಸಿದ್ದ ಅರ್ಜಿಯನ್ನು ಇಂದಿನ ಪಟ್ಟಿಗೆ ಸೇರ್ಪಡೆಗೊಳಿಸಲು ಒಪ್ಪಿಕೊಂಡಿದ್ದು, ಇದನ್ನು ನಾವು ನೋಡಿಕೊಳ್ಳುತ್ತೇವೆ ಎಂದು ನ್ಯಾಯಪೀಠ ಹೇಳಿದೆ. ಮುಸ್ಲಿಂ ಧರ್ಮದಲ್ಲಿರುವ ನಿಖಾ ಹಲಾಲ ಮತ್ತು ಬಹುಪತ್ನಿತ್ವ ಆಚರಣೆಯನ್ನು ನಿಷೇಧ ಮಾಡುವಂತೆ ದೆಹಲಿ ಮೂಲದ ಸಮೀನಾ ಬೇಗಂ ಎಂಬುವರು ಸುಪ್ರೀಂಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ನನಗೆ ಕೆಲವರಿಂದ ಅರ್ಜಿಯನ್ನು ಹಿಂಪಡೆಯುವಂತೆ ಬೆದರಿಕೆ ಇದೆ. ಹೀಗಾಗಿ ಈ ಅರ್ಜಿಯನ್ನು ತುರ್ತು ವಿಚಾರಣೆ ನಡೆಸುವಂತೆ ಸಮೀನಾ ಬೇಗಂ ಮನವಿ ಮಾಡಿದ್ದರು.
ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿಗಳ ಪಂಚ ಪೀಠ ಕೇಂದ್ರ ಸರ್ಕಾರಕ್ಕೆ ತನ್ನ ಅಭಿಪ್ರಾಯವನ್ನು ತಿಳಿಸುವಂತೆಯೂ ನೋಟಿಸ್ ನೀಡಿದೆ.
ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ ಸದ್ಯದಲ್ಲೇ ಸರ್ಕಾರದ ತೀರ್ಮಾನವನ್ನು ನ್ಯಾಯಾಲಯದ ಗಮನಕ್ಕೆ ತರಲಿದ್ದಾರೆ ಎಂದು ತಿಳಿದುಬಂದಿದೆ. ಬಹುಪತ್ನಿತ್ವ ಹೊಂದುವುದು ಹಾಗೂ ನಿಖಾ ಹಲಾಲ(ಮದುವೆ ಯಾಗುವವರೆಗೂ ನಿಷೇಧ ಹೇರುವುದು) ಈ ಸಂಪ್ರದಾಯವನ್ನು ತೆಗೆದು ಹಾಕಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ